ನವದೆಹಲಿ: ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ - ಜಿಎಸ್‌ಟಿ 1.33 ಲಕ್ಷ ಕೋಟಿ ರೂ.ಗೂ ಅಧಿಕವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18 ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಫೆಬ್ರವರಿಯ ಆರಂಭದಲ್ಲೂ ದೇಶಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರಾನ್ ಭಾರಿ ಸದ್ದು ಮಾಡಿತ್ತು. ಇದರ ಹೊರತಾಗಿಯೂ ಜಿಎಸ್‌ಟಿ ಸಂಗ್ರಹವೂ ವೃದ್ಧಿಯಾಗುತ್ತಿದೆ. 2022 ಫೆಬ್ರವರಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,33,026 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಜಿಎಸ್‌ಟಿ 24,435 ಕೋಟಿ ರೂ., ರಾಜ್ಯ ಜಿಎಸ್‌ಟಿ 30,779 ಕೋಟಿ ರೂ.ಇದೆ. ಇಂಟಿಗ್ರೇಟೆಡ್ ಜಿಎಸ್‌ಟಿ 67,471 ಕೋಟಿ ರೂ.(33,837 ಕೋಟಿ ರೂ. ಸಂಗ್ರಹ ಸೇರಿ). ಸೆಸ್‌ನಿಂದ 10,340 ಕೋಟಿ ಸಂಗ್ರಹವಾಗಿದ್ದು, ಇದರಲ್ಲಿ ಸರಕು ಆಮದಿನಿಂದ ಬಂದ ತೆರಿಗೆಯ ಮೊತ್ತ 638 ಕೋಟಿ ರೂಪಾಯಿ ಇದೆ.
ಫೆಬ್ರವರಿ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ.18ರಷ್ಟು ಹೆಚ್ಚಾಗಿದೆ. 2020ರ ಫೆಬ್ರವರಿಯಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇ.26 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.