ನವದೆಹಲಿ: ಪ್ರಸ್ತುತದ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಭತ್ತ ಸಂಗ್ರಹವು ಶೇ 25ರಷ್ಟು ಏರಿಕೆಯಾಗಿದ್ದು, 92,121 ಕೋಟಿ ರೂ. ಮೌಲ್ಯದ 487.92 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಪ್ರಕಟಣೆಯಲ್ಲಿ ತಿಳಿದು ಬಂದಿದೆ.
ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆಎಂಎಸ್) ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಮತ್ತು ರಾಜ್ಯ ಸಂಸ್ಥೆಗಳು ಡಿಸೆಂಬರ್ 31ರವರೆಗೆ 487.92 ಲಕ್ಷ ಟನ್ ಭತ್ತ ಖರೀದಿಸಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 390.56 ಲಕ್ಷ ಟನ್ ಆಗಿತ್ತು. 92,120.85 ಕೋಟಿ ರೂ. ಎಂಎಸ್‌ಪಿ ಮೌಲ್ಯದೊಂದಿಗೆ ಕೆಎಂಎಸ್ ಖರೀದಿ ಕಾರ್ಯಾಚರಣೆಗಳಿಂದ ಸುಮಾರು 62.28 ಲಕ್ಷ ರೈತರಿಗೆ ಲಾಭವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ದುಃಖ ಸಾಗರದಲ್ಲಿ ಸಾಗರೋತ್ತರ ವಹಿವಾಟು: 16 ಶತಕೋಟಿ ಡಾಲರ್ಗೇರಿದ ವ್ಯಾಪಾರ ಕೊರತೆ!
487.92 ಲಕ್ಷ ಟನ್ ಖರೀದಿಯಲ್ಲಿ ಪಂಜಾಬ್ 202.77 ಲಕ್ಷ ಟನ್ ನೀಡಿದೆ. ಇದು ಒಟ್ಟು ಸಂಗ್ರಹದ ಶೇ 41.55ರಷ್ಟಿದೆ. ಆಹಾರ ಕಾನೂನು ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅದರ ಅಗತ್ಯವನ್ನು ಪೂರೈಸಲು ಸರ್ಕಾರವು ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಗೋಧಿ ಮತ್ತು ಭತ್ತವನ್ನು ಸಂಗ್ರಹಿಸುತ್ತದೆ. 2020ರ ಡಿಸೆಂಬರ್ 31ರವರೆಗೆ 21,989.94 ಕೋಟಿ ರೂ. ಮೌಲ್ಯದ 75,03,914 ಹತ್ತಿ ಬೇಲ್ ಸಂಗ್ರಹಿಸಲಾಗಿದ್ದು, 14,69,704 ರೈತರಿಗೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದೆ.