ಸ್ಯಾನ್ ಫ್ರಾನ್ಸಿಸ್ಕೊ: ವಿದೇಶಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸ್‌ಗಳನ್ನು ಮಾತ್ರ ನಿಷೇಧಿಸುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರವನ್ನು ಹಿಂಪಡೆಯಲು ಹೇಳಿದ್ದ ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಮತ್ತು ಇತರ ಟೆಕ್ ಸಂಸ್ಥೆಗಳು ಕಳೆದ ವಾರ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಲ್ಲಿಸಿದ್ದ ಮೊಕದ್ದಮೆಯಲ್ಲಿ ಸೇರಿಕೊಂಡಿವೆ.
ವಿದ್ಯಾರ್ಥಿ ವೀಸಾ ನಿರ್ಬಂಧಗಳು ತಮ್ಮ ವ್ಯವಹಾರಗಳಿಗೆ ಹಾನಿಯನ್ನು ಉಂಟು ಮಾಡುತ್ತವೆ. ಅಮೆರಿಕದ ಭವಿಷ್ಯದ ಸ್ಪರ್ಧಾತ್ಮಕತೆಯು ಪ್ರತಿಭಾವಂತ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಮತ್ತು ಅವರನ್ನು ಉಳಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪೇಪಾಲ್ ಸೇರಿದಂತೆ ಟೆಕ್ ಕಂಪನಿಗಳು ಜಂಟಿಯಾಗಿ ತಿಳಿಸಿವೆ.
ಅಮೆರಿಕದಲ್ಲಿ ಸುಮಾರು 180 ಶೈಕ್ಷಣಿಕ ಸಂಸ್ಥೆಗಳು ಮೊಕದ್ದಮೆಯ ಭಾಗವಾಗಿ ಸೇರಿಕೊಂಡಿವೆ. ಈ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸಮರ ಸಾರಿವೆ. ಜುಲೈ 6ರಂದು, ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ಐಸಿಇ) ವಿದ್ಯಾರ್ಥಿಗಳಿಗೆ ನೀಡಲಾದ ಎಫ್-1 ಮತ್ತು ಎಂ-1 ವೀಸಾಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅವುಗಳನ್ನು ವೈಯಕ್ತಿಕ ಕೋರ್ಸ್‌ಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಥವಾ ಆನ್‌ಲೈನ್ ಮತ್ತು ವೈಯಕ್ತಿಕ ಕೋರ್ಸ್‌ಗಳ ಸಂಯೋಜನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆನ್‌ಲೈನ್ ಕೋರ್ಸ್‌ಗಳನ್ನು ತೆಗೆದುಕೊಳ್ಳುವವರು ವೀಸಾಕ್ಕೆ ಅರ್ಹರಾಗಿರುವುದಿಲ್ಲ.
ಐಸಿಇಯ ಹೊಸ ನೀತಿಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ತೀವ್ರವಾಗಿ ಅಡ್ಡಿಪಡಿಸಲಿದೆ ಎಂದು ಉನ್ನತ ಶಿಕ್ಷಣ ಮತ್ತು ವಲಸೆಯ ಅಧ್ಯಕ್ಷರ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಮಿರಿಯಮ್ ಫೆಲ್ಡ್ಬ್ಲಮ್ ಅವರು ತಿಳಿಸಿದ್ದಾರೆ. 180 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ ಉನ್ನತ ಶಿಕ್ಷಣ ಮತ್ತು ವಲಸೆಯ ಅಧ್ಯಕ್ಷರ ಒಕ್ಕೂಟವು 22 ಪುಟಗಳ ದಾಖಲೆಯನ್ನು ಹೊರಡಿಸಿದೆ. ಸರ್ಕಾರದ ಹೊಸ ನೀತಿ ರದ್ದುಪಡಿಸಬೇಕು ಎಂದು ರಾಷ್ಟ್ರವ್ಯಾಪಿ ಕೂಗು ಕೇಳಿಬರುತ್ತಿದೆ.