ನವದೆಹಲಿ: ವೇತನ ಏರಿಕೆಗೆ ಆಗ್ರಹಿಸಿ ಮಾರ್ಚ್ 11ರಿಂದ 13ರವರೆಗೆ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ತಿಳಿಸಿದೆ.
ಬ್ಯಾಂಕ್ ನೌಕರರ ವೇತನ ಪ್ರಸ್ತಾಪದಲ್ಲಿ ಶೇ 12.5ರಿಂದ ಶೇ 15ಕ್ಕೆ ಹೆಚ್ಚಿಸಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಕೊಂಡಿದೆ. ಸಾಮಾನ್ಯ ಬೆಳವಣಿಗೆಗಳ ದೃಷ್ಟಿಯಿಂದ ಎಲ್ಲ ಪ್ರತಿಭಟನಾ ಆಂದೋಲನಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ಒಕ್ಕೂಟ ತಿಳಿಸಿದೆ.
ಸಾಕಷ್ಟು ಚರ್ಚೆ ಹಾಗೂ ಮಾತುಕತೆಯ ನಂತರ ಶೇ 20ರಷ್ಟು ಸಂಬಳ ಏರಿಕೆಯ ಪ್ರಸ್ತಾಪನೆಯಲ್ಲಿ ಶೇ 15ರಷ್ಟು ಹೆಚ್ಚಿಸಲು ಇಂಡಿಯನ್ ಬ್ಯಾಂಕ್ ಅಸೋಸಿಯೆಷನ್ ತೀರ್ಮಾನಿಸಿದೆ. ಈ ಹಿಂದೆ ಕರೆ ನೀಡಲಾಗಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಮಾರ್ಚ್ 11ರಿಂದ 13ರವರೆಗೆ ಬ್ಯಾಂಕ್ಗಳ ನೌಕರರ ಒಕ್ಕೂಟಗಳು ತೀರ್ಮಾನಿಸಿದ್ದವು. 3 ದಿನಗಳ ಮುಷ್ಕರದಿಂದ ಬ್ಯಾಂಕ್ ಸೇವೆ ಸ್ಥಗಿತಗೊಂಡರೆ ಎರಡನೇ ಶನಿವಾರ ಮತ್ತು ಭಾನುವಾರದಂದು ಮಾರ್ಚ್ 14 ಮತ್ತು 15ರಂದು ಬ್ಯಾಂಕ್ಗಳಿಗೆ ರಜೆ ಇರುತ್ತಿತ್ತು. ಹೀಗಾಗಿ, ಇದು ಗ್ರಾಹಕರಿಗೆ, ವರ್ತಕರಿಗೆ ಮತ್ತು ಇತರ ವ್ಯವಹಾರಗಳಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು. ಮುಷ್ಕರ ಹಿಂದಕ್ಕೆ ತೆಗೆದುಕೊಂಡಿದ್ದರಿಂದ ದೈನಂದಿನ ವ್ಯವಹಾರಗಳು ಸುಗಮವಾಗಿ ನಡೆಯಲಿವೆ.