ನವದೆಹಲಿ: ಸರ್ಕಾರಿ ಸ್ವಾಮ್ಯದ 10 ಬ್ಯಾಂಕುಗಳ ವಿಲೀನ ಪ್ರಕ್ರಿಯೆಯು ಏಪ್ರಿಲ್ 1ರಿಂದ ಆರಂಭವಾಗಲಿದ್ದು, ಇದರ ಸಿದ್ಧತೆ ಪರಿಶೀಲಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ 12ರ ಗುರುವಾರದಂದು ವಿಲೀನವಾಗುವ ಬ್ಯಾಂಕ್ಗಳ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಈ ತಿಂಗಳಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ನಾಲ್ಕು ಬ್ಯಾಂಕ್ಗಳಾಗಿ ಕ್ರೋಡೀಕರಿಸಲು ಅನುಮೋದನೆ ನೀಡಿತ್ತು.
ಮೂಲಗಳ ಪ್ರಕಾರ, ಹಣಕಾಸು ಸಚಿವರು ಮಾರ್ಚ್ 12ರಂದು ಬ್ಯಾಂಕ್ಗಳನ್ನು ವಿಲೀನಗೊಳಿಸುವ ಯೋಜನೆ ಮತ್ತು ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ.
ಕ್ರೆಡಿಟ್ ಮತ್ತು ಠೇವಣಿಗಳ ಬೆಳವಣಿಗೆ, ವಿಲೀನದ ನಂತರ ವರ್ಷವಾರು ಸುಗಮ ವಹಿವಾಟು ಸೇರಿದಂತೆ ವ್ಯಾಪಾರ ಮತ್ತು ಹಣಕಾಸು ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಲಿದ್ದಾರೆ.
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಜೊತೆಗೆ ವಿಲೀನಗೊಳಿಸಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬಳಿಕ ಪಿಎನ್‌ಬಿ ಭಾರತದ ಎರಡನೇ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಲಿದೆ.
ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತಿದ್ದು, ಇದು ಭಾರತದ ನಾಲ್ಕನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಒಗ್ಗೂಡಿಸಿ ಐದನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ರಚಿಸಲಾಗುತ್ತಿದೆ.