ನವದೆಹಲಿ: 'ವಂದೇ ಭಾರತ್ ಮಿಷನ್'ನಲ್ಲಿ ಪಾಲ್ಗೊಂಡಿದ್ದ ಭಾರತದ ರಾಷ್ಟ್ರೀಯ ವಾಯುಯಾನ ಸೇವೆ ಏರ್ ಇಂಡಿಯಾದ 5 ಮಂದಿ ಹಿರಿಯ ಪೈಲಟ್‌ಗಳು ಮೇ ತಿಂಗಳಲ್ಲಿ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಪ್ಟನ್ ಹರ್ಶ್ ತಿವಾರಿ, ಕ್ಯಾಪ್ಟನ್ ಪ್ರಸಾದ್ ಕರ್ಮಕರ್, ಕ್ಯಾಪ್ಟನ್ ಸಂದೀಪ್ ರಾಣಾ, ಕ್ಯಾಪ್ಟನ್ ಜಿ.ಪಿ.ಎಸ್ ಗಿಲ್ ಮತ್ತು ಕ್ಯಾಪ್ಟನ್ ಅಮಿತೇಶ್ ಪ್ರಸಾದ್ ಮೃತ ಪೈಲಟ್‌ಗಳು.
ಏಪ್ರಿಲ್‌ನಲ್ಲಿ ಏರ್ ಇಂಡಿಯಾ, 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ತನ್ನ ಉದ್ಯೋಗಿಗಳಿಗಾಗಿ ವ್ಯಾಕ್ಸಿನೇಷನ್ ಶಿಬಿರವನ್ನು ಸ್ಥಾಪಿಸಿತ್ತು. ಆದರೆ ಬಳಿಕ ಲಸಿಕೆ ಕೊರತೆಯಿಂದಾಗಿ ಕೆಲ ದಿನಗಳ ಕಾಲ ವ್ಯಾಕ್ಸಿನೇಷನ್ ಪ್ರಕ್ರಿಯೆ ಮೊಟಕುಗೊಳಿಸಿ, ಮೇ 15ರಿಂದ ಮತ್ತೆ ಆರಂಭಿಸಿದೆ. ಇದೀಗ ತನ್ನೆಲ್ಲಾ ಸಿಬ್ಬಂದಿಗೆ ವ್ಯಾಕ್ಸಿನ್ ನೀಡುತ್ತಿದೆ.
ವಂದೇ ಭಾರತ್ ಮಿಷನ್:
ಕೊರೊನಾದಿಂದಾಗಿ 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ದೇಶದಲ್ಲಿ ನಿಲ್ಲಿಸಲಾಗಿತ್ತು. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಮೇ 6ರಂದು ಕೇಂದ್ರ ಸರ್ಕಾರ 'ವಂದೇ ಭಾರತ್ ಮಿಷನ್' ಶುರು ಮಾಡಿದೆ. ಇದರಡಿಯಲ್ಲಿ 2021ರ ಮಾರ್ಚ್ ಒಳಗಾಗಿ 67.5 ಲಕ್ಷ ಜನರನ್ನು ದೇಶಕ್ಕೆ ಮರಳಿ ಕರೆತರಲಾಗಿದೆ.