ಹೈದರಾಬಾದ್: ಇಂದು ಪ್ರೇಮಿಗಳ ದಿನ. ಪ್ರೀತಿಯ ನಿವೇದನೆಯ ಜೊತೆಗೆ ಯಾರೆಲ್ಲಾ ಹೊಸ ಜೀವನಕ್ಕೆ ಕಾಲಿಡುತ್ತಾರೋ ಅವರೆಲ್ಲಾ ಹಣಕಾಸಿನ ಯೋಜನೆ ರೂಪಿಸುವುದೂ ಅಷ್ಟೇ ಮುಖ್ಯ. ಆಗ ಮಾತ್ರ ನವಜೋಡಿಗಳು ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಸ್ಪಷ್ಟವಾದ ಆರ್ಥಿಕ ಯೋಜನೆಯನ್ನು ಹೊಂದಲು ನವಜೋಡಿಗಳು ಕೆಲವೊಂದು ಸಲಹೆಗಳನ್ನು ಪರಿಶೀಲಿಸಿ.
ದಾಂಪತ್ಯ ಜೀವನ ಆರಂಭಿಸಿದ ಬಳಿಕ ಸುಖಮಯ ಜೀವನಕ್ಕಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ಆರ್ಥಿಕ ಯೋಜನೆ ರೂಪಿಸುವುದು. ಪರಸ್ಪರರು ಆದಾಯ - ವೆಚ್ಚಗಳ ಬಗ್ಗೆ ಅರಿಯಬೇಕು. ಯುವ ದಂಪತಿ ಇಂದು ತಾವು ಹೂಡಿಕೆ ಮಾಡುವ ಹಣವು ಮುಂದೊಂದು ದಿನ ದೊಡ್ಡ ಮೊತ್ತವಾಗಿ ಬೆಳೆದು ಜೀವನಕ್ಕೆ ಆಧಾರವಾಗಲಿದೆ.
ದುಡಿಮೆ - ಆದಾಯ- ಖರ್ಚಿನ ಬಗ್ಗೆ ಅರಿಯಿರಿ: ನವ ದಂಪತಿ ಮೊದಲು ತಮ್ಮ ಆರ್ಥಿಕ ಲೆಕ್ಕಾಚಾರಗಳ ಬಗ್ಗೆ ಪರಸ್ಪರ ಅರಿಯಬೇಕು. ಅಲ್ಲದೇ ಒಂದು ಗುರಿಯನ್ನೂ ಹೊಂದಬೇಕು. ಇದರ ಸಾಕಾರಕ್ಕಾಗಿ ಇಬ್ಬರೂ ದುಡಿಯಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಒಬ್ಬರು ಮಾತ್ರ ದುಡಿಯುವುದಾದರೆ ಮನೆಯ ಖರ್ಚುಗಳನ್ನು ಇನ್ನೊಬ್ಬರು ನಿಭಾಯಿಸುವುದನ್ನು ಕಲಿಯಬೇಕು. ಇದಲ್ಲದೇ ಭವಿಷ್ಯದ ಕಾರಣಕ್ಕಾಗಿ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ.
ಓದಿ: ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲೇ ಆಘಾತ: ಸೆನ್ಸೆಕ್ಸ್ 1,500 ಪಾಯಿಂಟ್ ಕುಸಿತ
ತಾವು ಗಳಿಸಿದ ಹಣದಲ್ಲಿ ಎಷ್ಟು ಪ್ರಮಾಣದ ಹಣವನ್ನು ಉಳಿಕೆ ಮಾಡಬೇಕು. ಖರ್ಚುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಜಂಟಿಯಾಗಿ ಚರ್ಚಿಸಬೇಕು. ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ಬಹುಮುಖ್ಯ. ಸರಿಯಾದ ಸಮಯದಲ್ಲಿ, ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಕಲಿಯಬೇಕು.
ಸಾಲ ಏಕೆ ಮಾಡಬೇಕು ಎಂಬುದು ತಿಳಿದಿರಲಿ: ಸಾಲ ಮಾಡಿ ತುಪ್ಪ ತಿನ್ನಿ ಎಂಬ ಮಾತಿದೆ. ಹಾಗಂತ ಯರ್ರಾಬಿರ್ರಿ ಸಾಲ ಮಾಡಿದರೆ ದುಡಿದ ಹಣವನ್ನು ಸಾಲ ಕಟ್ಟುವುದರಲ್ಲೇ ಕಳೆಯಬೇಕಾಗುತ್ತದೆ. ಹಾಗಾಗಿ ನಾವು ಯಾವ ಕಾರಣಕ್ಕಾಗಿ ಸಾಲ ಮಾಡುತ್ತಿದ್ದೇವೆ. ನಮ್ಮ ಆದಾಯ ಎಷ್ಟು? ಎಂಬುದನ್ನು ತಿಳಿದು ಅಗತ್ಯಕ್ಕೆ ಅನುಗುಣವಾಗಿ ಸಾಲ ಮಾಡಬೇಕು. ಅಲ್ಲದೇ ಕಡಿಮೆ ಬಡ್ಡಿ ದರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅನಗತ್ಯ ವಸ್ತುಗಳ ಖರೀದಿ, ವಿಲಾಸಿ ಜೀವನಕ್ಕಾಗಿ ಸಾಲ ಮಾಡಲೇಬಾರದು. ಮನೆ ನಿರ್ಮಾಣಕ್ಕಾಗಿ ಸಾಲ ಮಾಡಬಹುದು. ಗೃಹ ನಿರ್ಮಾಣಕ್ಕಾಗಿ ಜಂಟಿಯಾಗಿ ಸಾಲ ಪಡೆದಲ್ಲಿ ಕಡಿಮೆ ಬಡ್ಡಿ ದರ ಬೀಳುತ್ತದೆ.
ವಿಮೆ ಪಾಲಿಸಿ ಹೊಂದಿರಬೇಕು: ಕುಟುಂಬದ ಪೋಷಕರು ಕಡ್ಡಾಯವಾಗಿ ಪಾಲಿಸಿಯನ್ನು ಹೊಂದಿರಬೇಕು. ಜೀವನದಲ್ಲಿ ನಾವು ನಿರೀಕ್ಷೆ ಮಾಡದೇ ಇರುವ ಘಟನೆಗಳು ನಡೆದಲ್ಲಿ ಅಂತಹ ಸಮಯದಲ್ಲಿ ನಮ್ಮನ್ನು ಅವಲಂಬಿಸಿದ ಕುಟುಂಬಸ್ಥರಿಗೆ ಆರ್ಥಿಕ ನೆರವು ಸಿಗುತ್ತದೆ. ಮಕ್ಕಳ ಶಿಕ್ಷಣ, ಉಳಿತಾಯ ಯೋಜನೆಗಳನ್ನು ಹೊಂದಿರಬೇಕು. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳು ಪ್ರತಿಯೊಬ್ಬರೂ ಮಾಡಿಸಿಕೊಳ್ಳಬೇಕು.
ಒಬ್ಬರಿಗೊಬ್ಬರು ಹೇಗೆ ರಕ್ಷಣೆಯಾಗಿರುತ್ತೀರೋ ಹಾಗೆಯೇ ಆರ್ಥಿಕ ಹೂಡಿಕೆಯಲ್ಲೂ ಪರಸ್ಪರ ಹೊಂದಾಣಿಕೆ ಇರಬೇಕು. ಆರ್ಥಿಕತೆ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರಬೇಕು. ನೀವು ಯಾವುದಾದರೂ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದರೆ, ಅದರ ಬಗ್ಗೆ ಆರ್ಥಿಕ ತಜ್ಞರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ.
ಹಣಕಾಸು ಯೋಜನೆ ಒಂದು ಪ್ರಯಾಣ ಇದ್ದಂತೆ. ಇದು ಒಂದೇ ದಿನದಲ್ಲಿ ಮುಗಿಯುವುದಿಲ್ಲ. ಪ್ರೇಮಿಗಳ ದಿನದಂದು ಹಣಕಾಸಿನ ವಿಚಾರಕ್ಕಾಗಿ ಸ್ವಲ್ಪ ಸಮಯವನ್ನು ಕಳೆಯಿರಿ. ಭವಿಷ್ಯದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ಮಾನಸಿಕವಾಗಿ ಈಗಲೇ ಸದೃಢರಾಗಿರಿ ಎಂದು ಟ್ರೇಡ್ಸ್‌ಸ್ಮಾರ್ಟ್‌ನ ಸಿಇಒ ವಿಕಾಸ್ ಸಿಂಘಾನಿಯಾ ಸಲಹೆ ನೀಡಿದ್ದಾರೆ.
ಓದಿ: ಕಾಲೇಜು ದಿನಗಳ 'ಮೋಡದ ಮೇಲಿನ ಮಹಾರಾಜ'ನ ಬ್ಯಾನರ್ ಜಾಹೀರಾತು ನೆನಪಿಸಿಕೊಂಡ ಬಿಗ್‌ಬಿ