ನವದೆಹಲಿ: ದೆಹಲಿ ಸರ್ಕಾರವು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಾಯಿತ ಕಾರ್ಮಿಕರಿಗೆ ತಲಾ 5,000 ರೂ. ನೀಡುವುದಾಗಿ ಘೋಷಿಸಿದೆ.
ಈ ಯೋಜನೆಯಡಿ ಒಟ್ಟು 2,10,684 ನಿರ್ಮಾಣ ಕಾರ್ಮಿಕರಿಗೆ ನೆರವು ನೀಡಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ, ದೆಹಲಿ ಸರ್ಕಾರವು 1,05,750 ನಿರ್ಮಾಣ ಕಾರ್ಮಿಕರಿಗೆ 52.88 ಕೋಟಿ ರೂ. ವಿತರಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನಿರ್ಮಾಣ ಕಾರ್ಮಿಕರಿಗೆ ಹೆಚ್ಚುವರಿ ಪರಿಹಾರ ನೀಡಲಿದೆ ಎಂದು ಹೇಳಿದೆ.
ಎಲ್ಲ ದೈನಂದಿನ ವೇತನ, ವಲಸೆ ಮತ್ತು ನಿರ್ಮಾಣ ಕಾರ್ಮಿಕರ ಅಗತ್ಯಗಳನ್ನು ಪೂರೈಸಲು ನಗರದ ಶಾಲೆಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ಆಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಗುರುವಾರ ಸಂಜೆ ವೇಳೆಗೆ ಈ ಆಹಾರ ವಿತರಣಾ ಕೇಂದ್ರಗಳಲ್ಲಿ ಸುಮಾರು 7,000 ಆಹಾರ ಪ್ಯಾಕೆಟ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದಿದೆ.
ನಿರ್ಮಾಣ, ದಿನಗೂಲಿ ವೇತನ ಮತ್ತು ವಲಸೆ ಕಾರ್ಮಿಕರಿಗೆ ಸಹಾಯವಾಣಿ ಸಹ ಸ್ಥಾಪಿಸಲಾಗುತ್ತಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಇದು ಸಕ್ರಿಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.