ಹೈದರಾಬಾದ್: ಲಾಕ್ಡೌನ್ ಬಳಿಕ ದೇಶದಲ್ಲಿ ಚಿನ್ನದ ದರದಲ್ಲಿ ಶೇ.18 ರಷ್ಟು ಏರಿಕೆಯಾಗಿದೆ. 2020 ರ ಜನವರಿ 1 ರಂದು 39,850 ರೂ. ಇದ್ದ ಚಿನ್ನದ ಬೆಲೆ ಜೂನ್ 12 ರಂದು 47,110 ರೂ.ಗೆ ಹೆಚ್ಚಳವಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಹಳದಿ ಲೋಹವನ್ನು ಹೊಂದಿರುವ ಭಾರತದಲ್ಲಿ ಚಿನ್ನದ ವ್ಯಾಪಾರಸ್ಥರು, ಹೂಡಿಕೆದಾರರು ಈ ಏರಿಕೆಯಿಂದ ಲಾಭ ಪಡೆದಿದ್ದಾರೆ.
ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಷೇರು ಮಾರುಕಟ್ಟೆಗಳು ಅಸ್ಥಿರವಾಗುತ್ತಲೇ ಇದೆ. ಹೀಗಾಗಿ ದೇಶೀಯ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವ ಸುರಕ್ಷಿತ ವಲಯವನ್ನ ಹುಡುಕುತ್ತಿದ್ದಾರೆ.
ಚಿನ್ನದ ಆಮದು ಕಡಿಮೆಗೊಳಿಸಲು ಹಾಗೂ ಭೌತಿಕ ಸ್ವರೂಪದಲ್ಲಿರುವ ಬಂಗಾರವನ್ನು ನಗದಾಗಿ ಪರಿವರ್ತಿಸಲು ಸಾರ್ವಭೌಮ ಗೋಲ್ಡ್ ಬಾಂಡ್ (ಎಸ್‌ಜಿಬಿ) ಯೋಜನೆ ಮೂಲಕ ಭಾರತ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು. ಇದು ಲಾಕ್ಡೌನ್ ವೇಳೆಯಲ್ಲಿ ಹೆಚ್ಚು ಉಪಯುಕ್ತವಾಗಿದೆ. ಹೀಗಾಗಿ ಕೋವಿಡ್ ಲಾಕ್ಡೌನ್ನಿಂದಾಗಿ ಜನರು ಮನೆಯಿಂದ ಬಂಗಾರದ ಅಂಗಡಿಗಳಿಗೆ ಹೋಗಿ ಚಿನ್ನ ಖರೀದಿಸುವ ಪ್ರಮಾಣ ಇಳಿಕೆಯಾಗಿದ್ದರೂ, ಇಟಿಎಫ್ (ವಿನಿಮಯ-ವಹಿವಾಟು ನಿಧಿ) ಮತ್ತು ಡಿಜಿಟಲ್ ಹೂಡಿಕೆ-ಖರೀದಿಗಳಿಗೆ ಹೊಡೆತ ಬಿದ್ದಿಲ್ಲ.
ಭಾರತೀಯರು ಏಕೆ ಚಿನ್ನಕ್ಕೆ ಆದ್ಯತೆ ನೀಡುತ್ತಾರೆ?
- ಚಿನ್ನವನ್ನು ನಗದಾಗಿ ಸುಲಭವಾಗಿ ಪರಿವರ್ತಿಸಬಹುದು
- ಆಭರಣ ಪ್ರಿಯರು
- ಚಿನ್ನದ ಮೇಲಿನ ಹೂಡಿಕೆಯಿಂದ ಲಾಭ ಅಧಿಕ
ಆರ್ಥಿಕ ಬಿಕ್ಕಟ್ಟಿನ ವೇಳೆ ಚಿನ್ನದ ಪಾತ್ರ:
ಕೊರೊನಾ ವೈರಸ್ ನಮ್ಮ ಕಾಲದ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಹೂಡಿಕೆದಾರರು ತಮ್ಮ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಂಡುಕೊಳ್ಳಲು ಚಿನ್ನದ ಮೊರೆ ಹೋಗುತ್ತಾರೆ. ಹೀಗಾಗಿ ಆರ್ಥಿಕ ಬಿಕ್ಕಟ್ಟಿನ ವೇಳೆಯಲ್ಲೂ ಚಿನ್ನದ ವ್ಯಾಪಾರ, ಹೂಡಿಕೆಯಲ್ಲಿ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ?
ಚಿನ್ನದ ಮೇಲಾಗಲಿ, ಇನ್ನಾವುದರ ಮೇಲಾಗಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ ಹೌದೋ ಅಲ್ಲವೋ ಎಂದು ಹೇಳಲಾಗುವುದಿಲ್ಲ. ಈ ಕುರಿತು ದೀರ್ಘಾವಧಿಯ ಹೂಡಿಕೆದಾರರು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಹೊಸದಾಗಿ ಹೂಡಿಕೆ ಮಾಡುವವರು ಮಾತ್ರ ಸ್ವಲ್ವ ಯೋಚಿಸಬೇಕಾಗಿದೆ. ಈ ಸಮಯದಲ್ಲಿ ತ್ವರಿತವಾಗಿ ಲಾಭ ಪಡೆಯುವ ಚಿಂತನೆಯಿಂದ ದೂರವಿರಬೇಕು.
ಚಿನ್ನ ಖರೀದಿಸುವವರು ಸಹ ಬಹಳ ಎಚ್ಚರಿಕೆ ಮತ್ತು ಸೂಕ್ತ ಪ್ರಮಾಣದಲ್ಲಿ ಖರೀದಿಸಬೇಕು. ಏಕೆಂದರೆ ಚಿನ್ನದ ಬೆಳವಣಿಗೆಯಲ್ಲಿ ಸಾಕಷ್ಟು ಏರುಪೇರುಗಳಿದ್ದು, ಇದನ್ನು ಅರ್ಥಮಾಡಿಕೊಳ್ಳಲು ಉತ್ತಮ ಮಾರ್ಗವೆಂದರೆ 50 ವರ್ಷಗಳ ಅವಧಿಯಲ್ಲಿ (1970-2020) ಚಿನ್ನದ ಬೆಲೆಗಳನ್ನು ಒಮ್ಮೆ ನೋಡಬೇಕು.
ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೇಗೆ?
- ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದ ಹೂಡಿಕೆ - ಇದು ಹೂಡಿಕೆಯ ಅವಧಿಯಲ್ಲಿ ಚಿನ್ನದ ಖರೀದಿಯ ವೆಚ್ಚವನ್ನು ನಿಯಂತ್ರಿಸುತ್ತದೆ
- ಹೂಡಿಕೆದಾರರ ಸಾಮರ್ಥ್ಯ ಮತ್ತು ಗುರಿಗಳ ಆಧಾರದ ಮೇಲೆ ಅವರ ಆಸ್ತಿ ಹಂಚಿಕೆ ಭಿನ್ನವಾಗಿರುತ್ತದೆ - ಇಂತಹ ಸಮಯದಲ್ಲಿ ಹೂಡಿಕೆದಾರರು ಶೇ.5 ರಿಂದ 15 ರಷ್ಟು ಬಂಡವಾಳವನ್ನು ಚಿನ್ನದ ಮೇಲೆ ಹೂಡಿಕೆ ಮಾಡುವುದು ವಿವೇಕಯುತ ತಂತ್ರವಾಗಿದೆ
- ಆಗಾಗ ಬಿದ್ದು ಹೋಗುವ ಮಾರುಕಟ್ಟೆಗಳ ಮಧ್ಯೆ ಚಿನ್ನದ ಮೇಲಿನ ಹೂಡಿಕೆಯು ನಷ್ಟವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸುತ್ತದೆ ಎಂಬುದನ್ನು ಅರಿತಿರಬೇಕು
- ಪ್ರತಿಯೊಬ್ಬ ಹೂಡಿಕೆದಾರರು ತಮ್ಮ ಹಣಕಾಸಿನ ಮೌಲ್ಯಮಾಪನ ಮಾಡಲು ಮತ್ತು ಸೂಕ್ತ ಆಸ್ತಿ ಹಂಚಿಕೆ ತಂತ್ರವನ್ನು ರೂಪಿಸಲು ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸುವುದು ಒಳಿತು
ಲೇಖಕರು- ಸಂಕರ್ಷ್ ಚಂದಾ
(ಗಮನಿಸಿ: ಈ ಮೇಲೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಕೇವಲ ಲೇಖಕರದ್ದೇ ಹೊರತು 'ಈಟಿವಿ ಭಾರತ'ದ್ದಲ್ಲ. ಇವುಗಳನ್ನು ಹೂಡಿಕೆಗೆ ಸಲಹೆಯೆಂದು ಭಾವಿಸಬಾರದು ಮತ್ತು ಯಾವುದೇ ಹೂಡಿಕೆ ಮಾಡುವ ಮೊದಲು ಅರ್ಹ ಸಲಹೆಗಾರರನ್ನು ಸಂಪರ್ಕಿಸುವಂತೆ ಈಟಿವಿ ಭಾರತ ಓದುಗರಿಗೆ ತಿಳಿಸುತ್ತದೆ)