ನವದೆಹಲಿ/ ಲಖ್ನೌ: ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಕೊರೊನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಿದ್ದು, ಈಗ ಭಾರತಕ್ಕೂ ಪ್ರವೇಶಿಸಿದೆ. ಇದು ದೇಶಾದ್ಯಂತ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಆರಂಭಿಸಿದೆ.
ಆಗ್ರಾದಲ್ಲಿರುವ ಹೋಟೆಲ್ ಹಾಗೂ ಪ್ರವಾಸಿ ತಾಣಗಳಿಗೆ ಇಟಲಿ, ಇರಾನ್ ಮತ್ತು ಚೀನಾ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸುವಂತೆ ಹಿರಿಯ ವೈದ್ಯಾಧಿಕಾರಿಗಳು ಆದೇಶಿಸಿದ್ದಾರೆ.
'ಕೋವಿಡ್-19 ಸೋಂಕು ತಗುಲಿರುವವರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದರೆ ಶೀಘ್ರವೇ ವೈದ್ಯಕೀಯ ತಂಡ ಭೇಟಿಕೊಟ್ಟು ಸೋಂಕಿತರನ್ನು ತಪಾಸಣೆಗೆ ಒಳಪಡಿಸಲಿದೆ' ಎಂದು ಆಗ್ರಾದ ಹಿರಿಯ ವೈದ್ಯಾಧಿಕಾರಿ ಡಾ. ಮುಖೇಶ್ ವತ್ಸ ಹೇಳಿದ್ದಾರೆ.
ಇಟಲಿ, ಇರಾನ್ ಅಥವಾ ಚೀನಾದಿಂದ ಯಾವುದೇ ವ್ಯಕ್ತಿ ಬರುತ್ತಿದ್ದರೆ ಅವರ ಬಗ್ಗೆ ನಮಗೆ ತಿಳಿಸಬೇಕು ಎಂದು ನಾವು ನಗರದ ಎಲ್ಲಾ ಹೋಟೆಲ್‌ಗಳಿಗೆ ಸೂಚನೆ ನೀಡಿದ್ದೇವೆ. ಹೋಟೆಲ್ನವರು ನಮಗೆ ತಿಳಿಸಿದ ತಕ್ಷಣ, ವೈದ್ಯರ ತಂಡ ಹೋಟೆಲ್‌ಗೆ ಹೋಗಿ ಕೊರೊನಾ ವೈರಸ್ ರೋಗಲಕ್ಷಣಗಳ ಬಗ್ಗೆ ಅವರನ್ನು ತಪಾಸಣೆ ನಡೆಸುತ್ತದೆ. ಕೋವಿಡ್ ವರದಿಯಾದ ದೇಶಗಳ ಸಂದರ್ಶಕರ ಬಗ್ಗೆ 24 ಗಂಟೆಗಳ ಕಾಲ ಚಾಲ್ತಿಯಲ್ಲಿರುವ ನಿಯಂತ್ರಣ ಕಚೇರಿಗೆ ತಿಳಿಸುವಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಆದೇಶಿಸಿದ್ದೇವೆ ಎಂದರು.
ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ನಾಗರಿಕರಿಗೆ ಮಾರ್ಚ್ 3ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಭಾರತ ಸರ್ಕಾರ ಅಮಾನತುಗೊಳಿಸಿದೆ.
ಮೊಬೈಲ್ ಲಾಂಚ್ ಸ್ಥಗಿತಗೊಳಿಸಿದ ಶಿಯೋಮಿ:
ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಪನ್ನ ಬಿರುಗಡೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ತಿಳಿಸಿದ್ದಾರೆ.
ಭಾರತದ ಕೆಲ ಭಾಗಗಳಲ್ಲಿ ಕೋವಿಡ್-19 ಸೋಂಕು ಹಬ್ಬಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಹೀಗಾಗಿ ಮಾರ್ಚ್ನಲ್ಲಿ ನಡೆಯಬೇಕಿದ್ದ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ಇದು ನಮ್ಮ ಗ್ರಾಹಕ, ಮಾಧ್ಯಮ ಸ್ನೇಹಿತರ ಉದ್ಯೋಗಿಗಳ ಹಾಗೂ ಪಾಲುದಾರರು ಸುರಕ್ಷತೆಗಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಸುರಕ್ಷತೆಯಿಂದಿರಿ ಎಂದು ಆಶಿಸಿದರು.
ಆರೋಗ್ಯ ಸಚಿವಾಲಯದ ನಿಯಮ ಪಾಲಿಸುವಂತೆ ಜನತೆಗೆ ಆದೇಶ:
ಫೆಬ್ರವರಿ 25ರಂದು ಪ್ರಯಾಣ ಮಾಡಿದವರಲ್ಲಿ ಸೋಂಕು ಇರುವುದು ದೃಢಪಟ್ಟರೆ ಆರೋಗ್ಯ ಸಚಿವಾಲಯ ನಿಯಮ ಪಾಲಿಸುವಂತೆ ಏರ್ ಇಂಡಿಯಾ ಕೋರಿದೆ.
ಫೆಬ್ರವರಿ 25ರ ಎಐ 154 ವಿಯೆನ್ನಾ-ದೆಹಲಿಯಲ್ಲಿ ನಡುವೆ ಪ್ರಯಾಣಿಸಿದ ಪ್ರಯಾಣಿಕರ ಗಮನಕ್ಕೆ. 20 ಪ್ರಯಾಣಿಕರಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ದಯವಿಟ್ಟು ಕೊರೊನಾ ವೈರಸ್ ಬಗ್ಗೆ ಆರೋಗ್ಯ ಸಚಿವಾಲಯ ಸೂಚಿಸಿರುವ ಪ್ರೋಟೋಕಾಲ್ ಅನ್ನು ಅನುಸರಿಸಿ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ನೋಯ್ಡಾದ 1000 ಕಂಪನಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ
ಕೊರೊನಾ ವೈರಸ್ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಬುದ್ಧ ನಗರ ಜಿಲ್ಲಾ ಆಡಳಿತ, ಇಲ್ಲಿನ 1,000ಕ್ಕೂ ಅಧಿಕ ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಸೋಂಕಿನ ಬಗ್ಗೆ ಎಚ್ಚರಿಕೆಯ ನೋಟಿಸ್ ನೀಡಿದೆ.
ಗೌತಮ್ ಬುದ್ ನಗರದ ಮುಖ್ಯ ವೈದ್ಯಾಧಿಕಾರಿ ಅನುರಾಗ್ ಭಾರ್ಗವ ಮಾತನಾಡಿ, ತಮ್ಮ ಕಂಪೆನಿಗಳಲ್ಲಿ ಯಾರಾದರೂ ವಿದೇಶಕ್ಕೆ ಹೋಗಿದ್ದರೆ, ಅವರು ಭಾರತಕ್ಕೆ ಮರಳಿದ ನಂತರ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಎಲ್ಲಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
15 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ
ಕೊರೊನಾ ವೈರಸ್ ಪ್ರಭಾವದ ಬಗೆಗಿನ ಕಳವಳಗಳ ನಡುವೆ ಹೂಡಿಕೆದಾರರ ಮನೋಭಾವವು ದುರ್ಬಲವಾಗಿರುವುದರಿಂದ ಸತತ ಮೂರನೇ ವಹಿವಾಟಿನ ದಿನವೂ ರೂಪಾಯಿ ಎದರು ಡಾಲರ್ ಮೌಲ್ಯ ಕುಸಿದಿದೆ.
ಮಂಗಳವಾರದ ವಹಿವಾಟಿನಂದು ಡಾಲರ್ ಎದುರು ರೂಪಾಯಿ 52 ಪೈಸೆಯಷ್ಟು ಏರಿಕೆಯಾಗಿ ₹ 72.20 ತಲುಪಿದೆ. ಇದು 2018ರ ಅಕ್ಟೋಬರ್ ತಿಂಗಳ ಬಳಿಕದ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ. ಕಳೆದ ಎರಡು ಸೀಸನ್ನಲ್ಲಿ ರೂಪಾಯಿ 107 ಪೈಸೆಯಷ್ಟು ವೃದ್ಧಿಸಿಕೊಂಡಿದೆ.
ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ: ಸಿಸೋಡಿಯಾ, ಜೈನ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಕೋವಿಡ್-19 ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ದೆಹಲಿಯನ್ನು ಸುರಕ್ಷಿತವಾಗಿಡಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 19 ಸರ್ಕಾರಿ ಮತ್ತು ಆರು ಖಾಸಗಿ ಆಸ್ಪತ್ರೆಗಳು ಸೇರಿದಂತೆ 25 ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜೈನ್ ಹೇಳಿದರು.
3.5 ಲಕ್ಷ ಎನ್- 95 ಮುಖವಾಡಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗೆ ನಾವು 8,000ಕ್ಕೂ ಹೆಚ್ಚು ಕಿಟ್‌ಗಳನ್ನು ನೀಡಿದ್ದೇವೆ ಎಂದರು.
ಟಾಟಾ ಸಮೂಹದ ಅಧ್ಯಕ್ಷ ಕಳವಳ
ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಟಾಟಾ ಸ್ಟೀಲ್ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳು ಚೀನಾದಿಂದ ವಿಶ್ವದ ಅನೇಕ ದೇಶಗಳಿಗೆ ಹರಡಿರುವುದರಿಂದ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ ಎಂದರು.
ಉಕ್ಕು ಉತ್ಪಾದನಾ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮವಿಲ್ಲ. ಆದರೆ, ಸಾರಿಗೆ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಗಮನ ಹರಿಸುತ್ತಿದ್ದೇವೆ. ಶೀಘ್ರದಲ್ಲೇ ವೈರಸ್ ಪರಿಣಾಮವು ಕಡಿಮೆಯಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ನವ ಮಂಗಳೂರು ಬಂದರು, ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್
ಕೊರೊನಾ ವೈರಸ್ (COVID-19) ಅನೇಕ ದೇಶಗಳಿಗೆ ಹರಡಿದ್ದು, ಭಾರತದಲ್ಲಿ ಈಗಾಗಲೇ ಎರಡು ಪ್ರಕರಣಗಳು ದೃಢಪಟ್ಟ ಬಗ್ಗೆ ವರದಿಯಾಗಿವೆ. ಇಲ್ಲಿರುವ ಬಂದರು ಮತ್ತು ವಿಮಾನ ನಿಲ್ದಾಣ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಕೇರಳದಲ್ಲಿ ಎರಡು ಪ್ರಕರಣಗಳು ಪತ್ತೆ ಆಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಇದರ ಜೊತೆಗೆ ನೆರೆಯ ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ನಿಗಾ ಇರಿಸಲಾಗಿದೆ ಎಂದರು.
ರಾಷ್ಟ್ರದಾದ್ಯಂತ 21 ವಿಮಾನ ನಿಲ್ದಾಣ ಮತ್ತು 77 ಬಂದರುಗಳಲ್ಲಿ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಗರಿಷ್ಠ ಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಇಟಲಿಯಿಂದ ಬರುವ ವಿಮಾನಗಳ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವಂತೆ ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ. ಅಂತಾರಾಷ್ಟ್ರೀಯ ವಿಮಾನಗಳು ಇಳಿಯುತ್ತಿದ್ದಂತೆ ನಿರ್ವಹಣಾ ಸಿಬ್ಬಂದಿ ಶಸ್ತ್ರಚಿಕಿತ್ಸೆಯ ಮುಖವಾಡ, ಕೈಗವಸುಗಳತಂಹ ರಕ್ಷಣಾತ್ಮಕ ಸಾಧನ ಬಳಸುವಂತೆ ತಿಳಿಸಿದೆ.