ಬೀಜಿಂಗ್: ಚೀನಾದ ಸರ್ಕಾರಿ ಸಿಚುವಾನ್ ಏರ್ಲೈನ್ಸ್ ಭಾರತಕ್ಕೆ ತನ್ನ ಎಲ್ಲ ಸರಕು ವಿಮಾನಯಾನಗಳನ್ನು 15 ದಿನಗಳವರೆಗೆ ಸ್ಥಗಿತಗೊಳಿಸಿದೆ.
ಬೀಜಿಂಗ್ ಬೆಂಬಲ ಮತ್ತು ಸಹಾಯ ನೀಡುತ್ತಿದ್ದರೂ ಚೀನಾದಿಂದ ಹೆಚ್ಚು ಅಗತ್ಯವಿರುವ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸರಬರಾಜುಗಳನ್ನು ಚೀನಾದಿಂದ ಖರೀದಿಸುವ ಖಾಸಗಿ ವ್ಯಾಪಾರಿಗಳ ಪ್ರಯತ್ನಗಳಿಗೆ ಈ ನಿರ್ಧಾರ ದೊಡ್ಡ ಅಡ್ಡಿ ಉಂಟುಮಾಡಿದೆ.
ಸಿಚುವಾನ್ ಏರ್‌ಲೈನ್ಸ್‌ನ ಭಾಗವಾಗಿರುವ ಸಿಚುವಾನ್ ಚುವಾನ್‌ಹಾಂಗ್ ಲಾಜಿಸ್ಟಿಕ್ಸ್ ಕಂಪನಿ ಲಿಮಿಟೆಡ್ ಸೋಮವಾರ ಮಾರಾಟ ಏಜೆಂಟರಿಗೆ ಬರೆದ ಪತ್ರದಲ್ಲಿ, ಖಾಸಗಿ ವ್ಯಾಪಾರಿಗಳ ತೀವ್ರ ಪ್ರಯತ್ನದ ಮಧ್ಯೆ ವಿಮಾನಯಾನವು ಕ್ಸಿಯಾನ್, ದೆಹಲಿ ಸೇರಿದಂತೆ ಆರು ಮಾರ್ಗಗಳಲ್ಲಿ ತನ್ನ ಸರಕು ವಿಮಾನಯಾನ ಸ್ಥಗಿತಗೊಳಿಸಿದೆ ಎಂದು ಹೇಳಿದೆ.
ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ (ಭಾರತದಲ್ಲಿ) ಹಠಾತ್ ಬದಲಾವಣೆಗಳ ಹಿನ್ನೆಲೆಯಲ್ಲಿ, ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಈ ನಿರ್ಧರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಭಾರತೀಯ ಮಾರ್ಗವು ಯಾವಾಗಲೂ ಸಿಚುವಾನ್ ಏರ್ಲೈನ್ಸ್ ಪ್ರಮುಖ ಕಾರ್ಯತಂತ್ರದ ಮಾರ್ಗವಾಗಿದೆ. ಈ ಅಮಾನತು ನಮ್ಮ ಕಂಪನಿಗೆ ಸಹ ದೊಡ್ಡ ನಷ್ಟವನ್ನುಂಟು ಮಾಡಿದೆ. ಬದಲಾದ ಪರಿಸ್ಥಿತಿಗೆ ನಾವು ತುಂಬಾ ವಿಷಾದಿಸುತ್ತೇವೆ. ಕಂಪನಿಯು 15 ದಿನಗಳ ನಂತರ ಪರಿಸ್ಥಿತಿ ಪರಿಶೀಲಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.