ಬೀಜಿಂಗ್: ಚೀನಾ ಪರಿಷ್ಕೃತ ಔಷಧ ಕಾನೂನು ತಿದ್ದುಪಡಿ ಮಾಡಿದೆ. ವಿದೇಶಗಳಲ್ಲಿ ಕಾನೂನುಬದ್ಧವಾಗಿದ್ದು ಚೀನಾದಲ್ಲಿ ನಕಲಿ ಔಷಧಗಳ ವರ್ಗವೆಂದು ಅನುಮೋದಿಸದ ಔಷಧಿಗಳನ್ನು ನೂತನ ಕಾಯ್ದೆಯಿಂದ ತೆಗೆದುಹಾಕುತ್ತಿದೆ. ಇದರಿಂದ ಭಾರತದ ಜೆನರಿಕ್ ಔಷಧಿಗಳು ಚೀನಾ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸುವ ಅವಕಾಶ ಪಡೆಯಲಿವೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಬಳಿಕ ಫಾರ್ಮಾಚ್ಯುಟಿಕಲ್ ಮಾರುಕಟ್ಟೆಗೆ ಮಾರು ಹೋಗಿರುವ ಚೀನಾ, ಜೆನರಿಕ್ ಔಷಧಿ ವಿರುದ್ಧದ ಕಠಿಣ ಕಾನೂನು ತಿದ್ದುಪಡಿ ಮಾಡಿದೆ. ಹೆಚ್ಚುತ್ತಿರುವ ಅರೋಗ್ಯ ವೆಚ್ಚದಿಂದ ಹೊರಬರಲು ಚೀನಾ ಇದೇ ಪ್ರಥಮ ಬಾರಿಗೆ ಜೆನರಿಕ್ ಔಷಧಿಗಳನ್ನು ಕಾನೂನಿನ ಅಡ್ಡಿಯಿಂದ ದೂರವಿಟ್ಟಿದೆ. ಈ ಮೂಲಕ ಪರೋಕ್ಷವಾಗಿ ಜನೌಷಧಿಯ ಪ್ರಭಾವ ಅಲ್ಲಿಗೂ ವ್ಯಾಪಿಸಿರಬಹುದು ಎನ್ನಲಾಗಿದೆ.
ಚೀನಾದ ಉನ್ನತ ಮಟ್ಟದ ಶಾಸಕಾಂಗ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಸ್ಥಾಯಿ ಸಮಿತಿ ಸೋಮವಾರ ಪರಿಷ್ಕೃತ ಕಾನೂನ ಅಂಗೀಕರಿಸಿತು. ಹಲವಾರು ನಕಲಿ ಔಷಧಗಳು ಮತ್ತು ಲಸಿಕೆ ಪ್ರಕರಣಗಳನ್ನು ಅನುಸರಿಸಿ ಔಷಧೀಯ ಮಾರುಕಟ್ಟೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಮೇಲೆ ನಿಗಾವಹಿಸಿ ಬಳಕೆದಾರರ ಸುರಕ್ಷೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದೆ.
ಕಳೆದ ವರ್ಷ ಭಾರತ ಚೀನಾದೊಂದಿಗೆ 95.5 ಬಿಲಿಯನ್ ಡಾಲರ್ನಷ್ಟು ವ್ಯಾಪಾರ-ವಹಿವಾಟು ನಡೆಸಿದೆ. ಆದರೆ, ಈ ವರ್ಷ 57 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ (Trade Deficit) ಕಂಡು ಬಂದಿತ್ತು. ಚೀನಾದ ಕಟ್ಟುನಿಟ್ಟಾದ ನಿಯಮಗಳಿಂದ ಯಾವುದೇ ಪ್ರಮುಖ ಭಾರತೀಯ ಫಾರ್ಮಾ ಕಂಪನಿಯು ಆ ದೇಶದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಔಷಧ ಆಡಳಿತ ಕಾನೂನಿನಿಂದ ಭಾರತದ ಜೆನರಿಕ್ ಔಷಧಗಳು ಸೇರಿದಂತೆ ಇತರೆ ರಾಷ್ಟ್ರಗಳ ಮೆಡಿಸಿನ್ಗಳು ಚೀನಾ ಮಾರುಕಟ್ಟೆಯನ್ನು ಮುಕ್ತವಾಗಿ ಪ್ರವೇಶಿಸಲಿವೆ.
ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆಯ್ದ ಜೆನರಿಕ್ ಔಷಧಿಗಳನ್ನು ಜನೌಷಧಿ ಮಳಿಗೆಗಳ ಮೂಲಕ 2015ರ ಜುಲೈ 1ರಂದು ಭಾರತ ಜಾರಿಗೆ ತಂದಿದೆ.