ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತ ಸೇವಾ ತೆರಿಗೆಯ (ಜಿಎಸ್ಟಿ) ಸಂಗ್ರಹದ ಒಟ್ಟು ಮೊತ್ತ ₹ 12.60 ರಿಂದ ₹ 13.40 ಲಕ್ಷ ಕೋಟಿ ತಲುಪಬಹುದು ಎಂದು ಸಂಶೋಧನಾ ಮತ್ತು ರೇಟಿಂಗ್ ಸಂಸ್ಥೆ ಕೇರ್ ರೇಟಿಂಗ್ಸ್ ಅಂದಾಜಿಸಿದೆ.
ಪರೋಕ್ಷ ತೆರಿಗೆ ಸಂಗ್ರಹ ಅಂಕಿಅಂಶಗಳ ಅನ್ವಯ, ಏಪ್ರಿಲ್ ತಿಂಗಳ ಜಿಎಸ್ಟಿ ಸಂಗ್ರಹ ಅತ್ಯಧಿಕ ಪ್ರಮಾಣದಲ್ಲಿತ್ತು. ಆದರೆ, ಇದು 2020ರ ಹಣಕಾಸು ವರ್ಷಕ್ಕೆ ನಿಗದಿ ಮಾಡಿಕೊಂಡ ಗುರಿಗಿಂತಲೂ ಕಡಿಮೆಯಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರದ ಖಜಾನೆಗೆ ಜಿಎಸ್ಟಿಯಿಂದ ₹ 12.60 ರಿಂದ ₹ 13.40 ಲಕ್ಷ ಕೋಟಿ ಹರಿದು ಬರಲಿದೆ. ಈ ಮೊತ್ತ ತಲುಪಲು ಮಾಸಿಕ ₹ 1.05 ಯಿಂದ ₹ 1.12 ಲಕ್ಷ ಕೋಟಿ ಸಂಗ್ರಹವಾಗಬೇಕಿದೆ ಎಂದು ರೇಟಿಂಗ್ಸ್ ತಿಳಿಸಿದೆ.
2020ರ ಹಣಕಾಸು ವರ್ಷದಲ್ಲಿ ಸರ್ಕಾರ ಹಣಕಾಸಿನ ಕೊರತೆಯ ಗುರಿ ಕಾಪಾಡಿಕೊಳ್ಳಬೇಕಾದರೆ ಜಿಎಸ್ಟಿ ಸಂಗ್ರಹಣೆಯಲ್ಲಿ ಸಮರ್ಥನೀಯತೆ ಖಚಿತಪಡಿಸಿಕೊಳಬೇಕು. ತೆರಿಗೆಯಲ್ಲಿ ಯಾವುದೇ ರೀತಿಯ ಸೋರಿಕೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಂದಿದೆ ಎಂದು ಸಂಸ್ಥೆ ಎಚ್ಚರಿಸಿದೆ.
ನೂತನ ತೆರಿಗೆ ಪದ್ಧತಿಯು 2017ರ ಜುಲೈ 1ರ ಬಳಿಕ ಜಾರಿಗೆ ಬಂದಿದ್ದು, ತೆರಿಗೆ ಪಾವತಿ ಪ್ರಮಾಣ ಶೇ 10.05ರಷ್ಟು ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ₹ 1.13 ಲಕ್ಷ ಕೋಟಿ ಹಣ ಬೊಕ್ಕಸಕ್ಕೆ ಹರಿದು ಬಂದಿದೆ. ಇದು 2018 ಮಾಸಿಕಕ್ಕಿಂತಲೂ ಶೇ 16.05ರಷ್ಟು ಅಧಿಕವಾಗಿದೆ. 2018-19ರ ವಿತ್ತೀಯ ವರ್ಷದಲ್ಲಿ ಮಾಸಿಕ ₹ 98,114 ಕೋಟಿ ಸಂಗ್ರಹವಾಗಿದ್ದು, 2017-18ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 9.2ರಷ್ಟು ಏರಿಕೆಯಾಗಿದೆ.