ನವದೆಹಲಿ: ಸಾವಿರಾರು ಜನರ ಪಾಲಿಗೆ ಅನ್ನದಾತ, ಕಾಫಿ ಡೇ ಸಾಮ್ರಾಜ್ಯದ ಸಾಮ್ರಾಟ ಸಿದ್ಧಾರ್ಥ್ ಅವರು ನೇತ್ರಾವತಿ ನದಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿದ ಬಳಿಕ ದೇಶಾದ್ಯಂತ ಹಲವರು ಕಂಬನಿ ಮಿಡಿದರು. ಇಂದು ಸಂಸತ್ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿದ್ಧಾರ್ಥ್ ಅವರ ಉದ್ಯಮ ವೈಫಲ್ಯದ ಬಗ್ಗೆ ಪ್ರಸ್ತಾಪಿಸಿದರು.
ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಮಸೂದೆ ಜಾರಿ ಮೇಲಿನ ಚರ್ಚೆಯ ವೇಳೆ ದೇಶದಲ್ಲಿ ವೈಫಲ್ಯಗೊಂಡ ಉದ್ಯಮಗಳಿಗೆ ನಿಷೇಧ ಹೇರುವುದಾಗಲಿ ಅಥವಾ ಕೀಳಾಗಿ ಕಾಣುವುದಾಗಲಿ ಮಾಡಬಾರದು ಎಂದು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಸಾವಿನ ವಿಚಾರ ಪ್ರಸ್ತಾಪಿಸಿ ಸೀತಾರಾಮನ್ ಹೇಳಿದ್ದಾರೆ.
ಉದ್ಯಮಿಗಳು ಋುಣಬಾಧ್ಯತೆ ಮತ್ತು ದಿವಾಳಿತನ (ಐಬಿಸಿ) ಪ್ರಕ್ರಿಯೆ ನೀತಿಯಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಗೌರವಾನ್ವಿತವಾಗಿ ನಿರ್ಗಮಿಸಬೇಕು ಎಂದರು.
ದೇಶದಲ್ಲಿನ ವ್ಯವಹಾರ ವೈಫಲ್ಯಗಳನ್ನು ನಿಷೇಧಿಸಬಾರದು ಅಥವಾ ಕೀಳಾಗಿ ನೋಡಬಾರದು. ಇಂತಹವುಗಳ ವಿರುದ್ಧವಾಗಿ ಐಬಿಸಿಯ ಪತ್ರ ಮುಖೇನ ಗೌರವಾನ್ವಿತ ನಿರ್ಗಮನಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.