ನವದೆಹಲಿ: ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ'ಯೋಜನೆ ಉತ್ತೇಜಿಸಲು ಹಾಗೂ ಉತ್ಪಾದನಾ ಬೆಳವಣಿಗೆ ವೃದ್ಧಿಸುವ ಉದ್ದೇಶದಿಂದ ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ಸರಕುಗಳ ಮೇಲಿನ ಕಸ್ಟಮ್ಸ್ ಸುಂಕ ಏರಿಸುವ ಸಾಧ್ಯತೆ ಗೋಚರಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ನೀಡಿದ ಬಜೆಟ್ ಶಿಫಾರಸುಗಳಲ್ಲಿ ಪೀಠೋಪಕರಣಗಳು, ರಾಸಾಯನಿಕಗಳು, ರಬ್ಬರ್, ಲೇಪಿತ ಕಾಗದ ಮತ್ತು ಕಾಗದ ಸಂಬಂಧಿತ ಉತ್ಪನ್ನಗಳೂ ಸೇರಿದಂತೆ ವಿವಿಧ ವಲಯಗಳ 300ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸುವ ಪ್ರಸ್ತಾಪವನ್ನು ಇರಿಸಿದೆ ಎಂದು ಹೇಳಿದ್ದಾರೆ.
ಶೇ 10-15ರಷ್ಟಿರುವ ರಬ್ಬರ್ಗಳ ಕಸ್ಟಮ್ಸ್ ಸುಂಕವು ಶೇ 40ರವರೆಗೆ, ಪಾದರಕ್ಷೆ ಮತ್ತು ಈ ಸಂಬಂಧಿತ ಉತ್ಪನ್ನಗಳನ್ನು ಶೇ 25ರಿಂದ ಶೇ 35ಕ್ಕೆ ಹಾಗೂ ಮರದ ಪೀಠೋಪಕರಣಗಳ ಆಮದು ಸುಂಕವನ್ನು ಪ್ರಸ್ತುತ ಶೇ 20ರಿಂದ ಶೇ 30ಕ್ಕೆ ಹೆಚ್ಚಿಸಲು ಸಚಿವಾಲಯ ಪ್ರಸ್ತಾಪಿಸಿದೆ.
ಕಡಿಮೆ ಮೌಲ್ಯದ ಮತ್ತು ಅಗ್ಗದ ಪಾದರಕ್ಷೆಗಳ ಆಮದುಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಸ್ಟಮ್ಸ್ ಸುಂಕ ಏರಿಕೆಯು ಬೆಲೆಯ ಸ್ಪರ್ಧಾತ್ಮಕತೆಯ ಸಮಸ್ಯೆಯನ್ನು ಪರಿಹರಿಸಲು ನೆರವಾಗಲಿದೆ. ಆಸಿಯಾನ್ ರಾಷ್ಟ್ರಗಳಿಂದ ಹೆಚ್ಚಿನ ವಸ್ತುಗಳು ಆಮದಾಗಲಿದ್ದು, ಇದರೊಂದಿಗೆ ಭಾರತವು ಮುಕ್ತ ವ್ಯಾಪಾರ ಒಪ್ಪಂದ ಹೊಂದಲಿದೆ. ಚೀನಾ ಈ ರಾಷ್ಟ್ರಗಳ ಮೂಲಕ ಹೆಚ್ಚಿನ ಪ್ರಮಾಣದ ಪಾದರಕ್ಷೆಗಳನ್ನು ಮರುಹೊಂದಿಕೆ ಮಾಡುತ್ತಿದೆ ಎಂಬ ಅನುಮಾನವಿದೆ ಎಂದು ಮೂಲಗಳು ತಿಳಿಸಿವೆ.