ಮುಂಬೈ: ನಾನಾ ಬ್ಯಾಂಕ್ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸಂಸ್ಥೆಗಳು ತನ್ನ ಆಸ್ತಿ ಮುಟ್ಟುಗೋಲುಗೆ ತಡೆ ನೀಡಬೇಕೆಂದು ಮದ್ಯದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಕಿಲ್ ಖುರೇಶಿ ಮತ್ತು ಎಸ್.ಜೆ. ಕಥವಾಲಾ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ ಮಲ್ಯ ಸಲ್ಲಿಸಿದ್ದ ಮನವಿ ತಿರಸ್ಕರಿಸಿದೆ.
ಹೈಕೋರ್ಟ್ ತನ್ನ ಮೇಲಿರುವ 'ಆರ್ಥಿಕ ಅಪರಾಧಿ' ಎಂಬ ಹಣೆಪಟ್ಟಿಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ಮುಗಿಸುವವರೆಗೆ ತನಗೆ ಹಾಗೂ ತನ್ನ ಸ್ವತ್ತುಗಳಿಗೆ ರಕ್ಷಣೆ ನೀಡಬೇಕೆಂದು ಮಲ್ಯ ನ್ಯಾಯಾಲಯಕ್ಕೆ ಕೋರಿದ್ದರು. ಅವರ ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯಿದೆ (ಎಫ್‌ಇಒಎ) ಕಾಯ್ದೆಯ ಜಾರಿಯನ್ನು ಪ್ರಶ್ನಿಸಿ ಮಲ್ಯ ಕೋರ್ಟ್ ಮೊರೆ ಹೋಗಿದ್ದಾರೆ.