ಬೀಜಿಂಗ್(ಚೀನಾ) : ಕ್ರಿಪ್ಟೋಕರೆನ್ಸಿಗಳ ಮೈನಿಂಗ್ ಮೇಲೆ ಚೀನಾ ತನ್ನ ದಬ್ಬಾಳಿಕೆಯನ್ನು ವಿಸ್ತರಿಸಿದೆ ಎಂದು ಹೊಸ ವರದಿಗಳು ಹೊರಬಿದ್ದ ನಂತರ ಬಿಟ್‌ಕಾಯಿನ್‌ನ ಬೆಲೆಯಲ್ಲಿ ಭಾರೀ ಬದಲಾವಣೆಗಳಾಗಿವೆ. ಸೋಮವಾರ ಬೆಳಗ್ಗೆ, ಬಿಟ್‌ಕಾಯಿನ್ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವ ಮೊದಲು ಶೇ.9ರಷ್ಟು ಕಡಿಮೆ ವಹಿವಾಟು ನಡೆಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ನಂತರ ಮಂಗಳವಾರ, ಕ್ರಿಪ್ಟೋ ಶೇ.3ರಷ್ಟು ಕುಸಿದು ಸುಮಾರು 32,000 ಯುಎಸ್ಡಿಗಳಿಗೆ ತಲುಪಿದೆ ಎಂದು ಕಾಯಿನ್ ಮಾರ್ಕೆಟ್ಕ್ಯಾಪ್ ಸೂಚ್ಯಂಕ ತಿಳಿಸಿದೆ.
ಕ್ರಿಪ್ಟೋ ಕಳೆದ ವಾರದಲ್ಲಿ ಶೇ.18.62ರಷ್ಟು ಕುಸಿದಿತ್ತು. ಇದಲ್ಲದೆ, ಈಥರ್, ಕಾರ್ಡಾನೊ, ಎಕ್ಸ್‌ಆರ್‌ಪಿ ಮತ್ತು ಡಾಗ್‌ಕೋಯಿನ್ ಸೇರಿದಂತೆ ಇತರ ಕ್ರಿಪ್ಟೋಗಳು ಸಹ ಕಡಿಮೆ ವಹಿವಾಟು ನಡೆಸುತ್ತಿದ್ದವು. ಚೀನಾದ ನಿಯಂತ್ರಕರು ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೈನಿಂಗ್ ಕಾರ್ಯಾಚರಣೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಂತಹ ಪ್ರಮುಖ ಮೈನಿಂಗ್ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ತಜ್ಞರ ಪ್ರಕಾರ, ಚೀನಾದ ಕ್ರಿಪ್ಟೋಕರೆನ್ಸಿ ಮೈನಿಂಗ್ ಸಾಮರ್ಥ್ಯದ ಶೇ.90ಕ್ಕಿಂತಲೂ ಹೆಚ್ಚು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.
ಬಿಟ್‌ಕಾಯಿನ್‌ಗಾಗಿ ವಿಶ್ವದ ಅತಿದೊಡ್ಡ ಮೈನಿಂಗ್ ನಡೆಯುತ್ತಿದ್ದರೂ, ಸಂಸ್ಥೆಗಳು ಮತ್ತು ಕಂಪನಿಗಳು ಗ್ರಾಹಕರಿಗೆ ಕ್ರಿಪ್ಟೋಕರೆನ್ಸಿ ಸೇವೆಗಳನ್ನು ಒದಗಿಸುವುದನ್ನು ನಿಷೇಧಿಸುವ ಮೂಲಕ ಚೀನಾ ಕ್ರಿಪ್ಟೋಕರೆನ್ಸಿಗಳ ಮೇಲಿನ ದಬ್ಬಾಳಿಕೆಯನ್ನು ತೀವ್ರಗೊಳಿಸಿದೆ.
ಬಿಟ್ ಕಾಯಿನ್ ಮೈನಿಂಗ್ ಎಂದರೇನು?: ಬಿಟ್‌ಕಾಯಿನ್ ಮೈನಿಂಗ್ ಎಂದರೆ ವಿಶ್ವದಲ್ಲೇ ಬಿಟ್ಕಾಯಿನ್ನ್ನ ಕೇಂದ್ರ ಕಾರ್ಯಾಚರಣೆಯಾಗಿದೆ. ಏಕೆಂದರೆ, ಇದು ಹೊಸ ಬಿಟ್‌ಕಾಯಿನ್ ಸೃಷ್ಟಿಗೆ ಅನುಕೂಲವಾಗುವುದಲ್ಲದೆ, ಇಡೀ ಬಿಟ್‌ಕಾಯಿನ್ ವ್ಯವಸ್ಥೆಯ ರೆಕಾರ್ಡಿಂಗ್ ವಹಿವಾಟುಗಳನ್ನು ನಡೆಸುತ್ತದೆ. ಬಿಟ್‌ಕಾಯಿನ್ ವಿಕೇಂದ್ರೀಕೃತ ಕರೆನ್ಸಿ. ಅಂದರೆ ಇದನ್ನು ಯಾವುದೇ ಕೇಂದ್ರೀಯ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಆದರೆ, ಬಿಟ್‌ಕಾಯಿನ್ ಹೊಂದಿರುವ ಜನರ ಸಮುದಾಯದಿಂದ ಇದನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.