ನವದೆಹಲಿ: ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಉಕ್ರೇನ್ಗೆ ನೆರವು ನೀಡಲು ಸಾಕಷ್ಟು ರಾಷ್ಟ್ರಗಳು ಮುಂದೆ ಬಂದಿವೆ. ಈಗ ಸರ್ಕಾರೇತರ ಸಂಸ್ಥೆಯೊಂದು ಉಕ್ರೇನ್ಗೆ ನೆರವು ನೀಡಲು ಮುಂದಾಗಿದ್ದು, ಕೇವಲ 2 ದಿನಗಳಲ್ಲಿ ಸುಮಾರು 4 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಡಿಜಿಟಲ್ ಟೋಕನ್ಗಳನ್ನು ದೇಣಿಗೆಗಾರರಿಂದ ಸ್ವೀಕರಿಸಿದೆ.
ಹೌದು, ಕಮ್ ಬ್ಯಾಕ್ ಅಲೈವ್ (Come Back Alive) ಎಂಬ ಸರ್ಕಾರೇತರ ಸಂಸ್ಥೆಯು ಕ್ರಿಪ್ಟೋಕರೆನ್ಸಿ ಮೂಲಕ ನೆರವು ನೀಡುವಂತೆ ಜಗತ್ತಿನಾದ್ಯಂತ ಮನವಿ ಮಾಡಿದೆ ಎಂದು ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋ ಅನಾಲಿಟಿಕ್ಸ್ ಸಂಸ್ಥೆ ಎಲಿಪ್ಟಿಕ್ ಮಾಹಿತಿ ನೀಡಿದೆ.
ಈವರೆಗೆ 317 ವೈಯಕ್ತಿಕ ದೇಣಿಗೆಗಳನ್ನು ಕಮ್ ಬ್ಯಾಕ್ ಅಲೈವ್ ಸ್ವೀಕರಿಸಿದ್ದು, ಪರಿಹಾರ ಬಂದ ಸರಾಸರಿ ಮೊತ್ತವು ಸುಮಾರು $1,000 ರಿಂದ $2,000 ಆಗಿದೆ ಎಂದು ಫಾರ್ಚೂನ್ ವರದಿ ಮಾಡಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಉಕ್ರೇನ್ ಪರ ಗುಂಪುಗಳು ಮತ್ತು ಉಕ್ರೇನ್ ಪರವಿರುವ ಕ್ರಿಪ್ಟೋ ಸಮುದಾಯಗಳು ಹಣವನ್ನು ನೀಡಿವೆ.
ಎಲಿಪ್ಟಿಕ್ ಪ್ರಕಾರ, ಹಣಕಾಸು ಸಂಸ್ಥೆಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ಕ್ರಿಪ್ಟೋಕರೆನ್ಸಿಯಲ್ಲಿ ದೇಣಿಗೆ ನೀಡುವ ಪ್ರಕ್ರಿಯೆ ಹೆಚ್ಚಾಗಿದೆ. ವಿವಿಧ ಸಂಸ್ಥೆಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ನೀಡುವ ಪ್ರಮಾಣ 2021ರಲ್ಲಿ ಶೇಕಡಾ 900ಕ್ಕಿಂತ ಹೆಚ್ಚಾಗಿದೆ. ಎಲಿಪ್ಟಿಕ್ ಸಂಸ್ಥೆಯು ಎನ್‌ಜಿಒಗಳು ಬಳಸುವ ಹಲವಾರು ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳನ್ನು ಗುರುತಿಸಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧ: ಟಾಪ್ 10 ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ಪ್ರಮುಖ ವಿಚಾರವೆಂದರೆ ಉಕ್ರೇನಿಯನ್ ಸೈಬರ್ ಅಲೈಯನ್ಸ್ ಕಳೆದ ವರ್ಷದಲ್ಲಿ ಬಿಟ್‌ಕಾಯಿನ್ ಮೂಲಕ 100,000 ಅಮೆರಿಕನ್ ಡಾಲರ್ ಅನ್ನು ಪಡೆದುಕೊಂಡಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯವು ತನ್ನ ಸೈನಿಕರಿಗೆ ತಮ್ಮ ಕರೆನ್ಸಿಗಳಲ್ಲಿ ದೇಣಿಗೆಗಳನ್ನು ಸ್ವೀಕರಿಸಲು ಬ್ಯಾಂಕ್ ಖಾತೆಯನ್ನು ಕೂಡಾ ರೂಪಿಸಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಭಯದಿಂದ ಕಳೆದ ಎರಡು ವಾರಗಳಿಂದ ಕ್ರಿಪ್ಟೋಕರೆನ್ಸಿ ಬೆಲೆಗಳು ತೀವ್ರವಾಗಿ ಕುಸಿದಿವೆ