ನವದೆಹಲಿ: ತೆರಿಗೆ ರಿಟರ್ನ್ಸ್‌ನ ವಿಚಾರಣೆ ಮತ್ತು ಪರಿಶೀಲನೆಯ ನೋಟಿಸ್‌ಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವವರನ್ನು ಆದಾಯ ತೆರಿಗೆ (ಐ-ಟಿ) ಇಲಾಖೆ ಪತ್ತೆಹಚ್ಚಿದೆ.
ತೆರಿಗೆ ಪಾವತಿ ಸಂಬಂಧ ಐಟಿ ಇಲಾಖೆ ಕಳುಹಿಸುವ ಇಮೇಲ್, ಎಸ್‌ಎಂಎಸ್ (ಕಿರು ಸಂದೇಶ ಸೇವೆ) ಮತ್ತು ಕೆಲವು ಸಂದರ್ಭಗಳಲ್ಲಿ ಭೌತಿಕ ಸೂಚನೆಗಳನ್ನು ತೆರಿಗೆ ಪಾವತಿದಾರರು ನಿರ್ಲಕ್ಷಿಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಐ - ಟಿ ಇಲಾಖೆಯು ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಿದೆ.
ನೋಟಿಸ್‌ಗಳಿಗೆ ಪ್ರತಿಕ್ರಿಯಿಸದ ವ್ಯಕ್ತಿಗಳನ್ನು, ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವವರನ್ನು ಪತ್ತೆಹಚ್ಚಿ ಸೂಕ್ತ ತೆರಿಗೆ ಮತ್ತು ದಂಡ ಸಂಗ್ರಹಿಸಲು ಐಟಿ ಮುಂದಾಗಿದೆ. ಇಂತಹದ್ದೇ ಒಂದು ಪ್ರಕರಣದಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಓರ್ವ ವ್ಯಕ್ತಿ ವರ್ಷಕ್ಕೆ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವುದಾಗಿ ತೋರಿಸಿದ್ದ. ಆದರೆ, ಲೆಕ್ಕಪರಿಶೋಧನಾ ತನಿಖೆಯಲ್ಲಿ ಸುಮಾರು 10 ಕೋಟಿ ರೂ. ನಗದು ಠೇವಣಿ ಮತ್ತು 7.5 ಕೋಟಿ ರೂ. ಬ್ಯಾಂಕ್ನಿಂದ ವಿತ್ಡ್ರಾ ಮಾಡಿಕೊಂಡಿದ್ದು ತಿಳಿದುಬಂತು.
ಇದನ್ನೂ ಓದಿ: ಲಾಕ್ಡೌನ್ ಟೈಮಲ್ಲಿ ಮನೆ ಮಾತಾದ ಝೂಮ್ನಿಂದ ಮತ್ತೆರಡು ಸೇವೆಗೆ ಬಿಗ್ ಪ್ಲಾನ್!
ಈ ಹಗರಣದ ಆರೋಪಿಯು ಆರು ನೋಟಿಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 10ಕ್ಕೂ ಹೆಚ್ಚು ಎಸ್‌ಎಂಎಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದ. ಈ ಬಗ್ಗೆ ಸಮೀಕ್ಷೆಯ ಕಾರ್ಯಾಚರಣೆ ನಡೆಸಿ, ಆತ ವಂಚಿಸಿದ್ದ ಮೊತ್ತದ ಪ್ರಮಾಣ ಕಲೆ ಹಾಕಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸಲಾದ ವ್ಯಾಪಾರದ ಕಚೇರಿ ಕೂಡ ಬೇರೊಬ್ಬರದು ಎಂಬುದು ಸಹ ತಿಳಿದು ಬಂದಿದೆ. ಐಟಿಗೆ ಈ ಬಗ್ಗೆ ತಿಳಿಯುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಈಗ, ಆತನ ಬ್ಯಾಂಕ್ ಖಾತೆ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ.
ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಕೆಲವು ಈ ಉಡಾಫೆ ಪಾವತಿದಾರರು ಐಟಿ ಇಲಾಖೆಯ ವಿನಾಯಿತಿ ನೋಟಿಸ್‌ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ವಿಧಾನಗಳಿಂದ ಇಲಾಖೆ ಸಾಕಷ್ಟು ಜಾಗರೂಕವಾಗಿದೆ. ಅಪ್ರಾಮಾಣಿಕ ತೆರಿಗೆದಾರರು ಮತ್ತು ಮೋಸಗಾರರು ತಂತ್ರಜ್ಞಾನ - ಚಾಲಿತ ತೆರಿಗೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.