ಮುಂಬೈ: ಗಾಳಿಯಲ್ಲಿ ಹಾರಾಡಬೇಕಿದ್ದ ವಾಯುಯಾನ ಉದ್ಯಮವು ನೆಲದ ಮೇಲೆ ಸ್ತಬ್ಧವಾಗಿ ನಿಂತಿದೆ. ಕೋವಿಡ್ ಸಾಂಕ್ರಾಮಿಕದ ಲಾಕ್‌ಡೌನ್ ಎರಡೂ ಕ್ಷೇತ್ರಗಳಲ್ಲಿನ ಮೂಲಸೌಕರ್ಯ ಉದ್ಯಮಗಳಿಗೆ ಅಪಾರ ನಷ್ಟವನ್ನುಂಟು ಮಾಡುವ ನಿರೀಕ್ಷೆಯಿದೆ ಎಂದು ವಿಶ್ಲೇಷಣಾ ಕಂಪನಿ ಕ್ರಿಸಿಲ್ ತಿಳಿಸಿದೆ.
ಅದರ ಅಂದಾಜಿನ ಪ್ರಕಾರ, ವಾಯುಯಾನ ಉದ್ಯಮಕ್ಕೆ ಈ ಆರ್ಥಿಕ ವರ್ಷದಲ್ಲಿ 24,000- 25,000 ಕೋಟಿ ರೂ. ನಷ್ಟ ಎದುರಾಗಲಿದೆ ಎಂದು ಅದು ಭವಿಷ್ಯ ನುಡಿದಿದೆ.
ವಿಮಾನಯಾನ ಸಂಸ್ಥೆಗಳು ಶೇ 70ಕ್ಕಿಂತ ಹೆಚ್ಚು ನಷ್ಟ ಅಥವಾ 17,000 ಕೋಟಿ ರೂ. ಆದಾಯ ಕಳೆದುಕೊಳ್ಳಲಿವೆ. ನಂತರ ವಿಮಾನ ನಿಲ್ದಾಣ ನಿರ್ವಾಹಕರು 5,000- 5,500 ಕೋಟಿ ರೂ. ಮತ್ತು ವಿಮಾನ ನಿಲ್ದಾಣದಲ್ಲಿರುವ ಚಿಲ್ಲರೆ ವ್ಯಾಪಾರಿಗಳು (ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ, ಡ್ಯೂಟಿ-ಫ್ರೀ ಸೇರಿ ಇತರೆ) 1,700-1,800 ಕೋಟಿ ರೂ. ನಷ್ಟ ಕಾಣಲಿವೆ ಎಂದಿದೆ.
ಕಳೆದ ಹತ್ತು ವರ್ಷಗಳಲ್ಲಿ ಉದ್ಯಮವು ವಾರ್ಷಿಕ ಶೇ 11ರಷ್ಟು ಬೆಳವಣಿಗೆಯನ್ನು ಕಾಯ್ದುಕೊಂಡಿತ್ತು. ಈಗ ಈ ವೇಗ ಸ್ಥಗಿತವಾಗಲಿದೆ. ಇದು ಆರ್ಥಿಕತೆಯ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದೆ.
ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾದಂತಹ ಹಬ್‌ಗಳಲ್ಲಿ ಪ್ರಯಾಣದ ನಿರ್ಬಂಧಗಳು ಹೆಚ್ಚು ಕಾಲ ಮುಂದುವರಿದರೆ ನಷ್ಟದ ಪ್ರಮಾಣ ಇನ್ನೂ ಏರುತ್ತದೆ. ಸಾಂಕ್ರಾಮಿಕ ರೋಗದ ಬಳಿಕ ಪೂರ್ವ ಮಟ್ಟ ತಲುಪಲು, ವಾಯುಯಾನ ಕ್ಷೇತ್ರವು ಕನಿಷ್ಠ 6ರಿಂದ 8 ತ್ರೈಮಾಸಿಕ ತೆಗೆದುಕೊಳ್ಳುತ್ತದೆ.
ಇವೆಲ್ಲ ಪ್ರಾಥಮಿಕ ಅಂದಾಜುಗಳಾಗಿದ್ದು, ಮೊದಲ ತ್ರೈಮಾಸಿಕವನ್ನು ಮೀರಿ ಲಾಕ್‌ಡೌನ್ ವಿಸ್ತರಿಸಿದರೆ ಒಟ್ಟು ನಷ್ಟ ಹೆಚ್ಚಾಗಬಹುದು ಎಂದು ಕ್ರಿಸಿಲ್ ಇನ್ಫ್ರಾಸ್ಟ್ರಕ್ಚರ್ ಅಡ್ವೈಸರಿಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ನಿರ್ದೇಶಕ ಜಗನ್ನಾರಾಯಣ್ ಪದ್ಮನಾಭನ್ ಹೇಳಿದ್ದಾರೆ.