ನವದೆಹಲಿ: ಭಾರತದಲ್ಲಿ ಕೊನೆಗೂ ಆ್ಯಪಲ್ ಆನ್‌ಲೈನ್ ಸ್ಟೋರ್‌ಗಳನ್ನು ಇಂದಿನಿಂದ ತೆರೆಯಲಾಗಿದ್ದು, ಆ್ಯಪಲ್ ಕಂಪನಿಯ ಎಲ್ಲ ಉತ್ಪನ್ನಗಳು ಈ ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ಲಭ್ಯ ಇರಲಿವೆ.
ಐಫೋನ್, ಐಪಾಡ್, ಮ್ಯಾಕ್ ಸೇರಿದಂತೆ ಇತರ ಉತ್ಪನ್ನಗಳು ಬೇಕಾದರೆ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಪಡೆಯಬೇಕಾಗಿತ್ತು. ಇದೀಗ ಆ್ಯಪಲ್ ಉತ್ಪನ್ನಗಳನ್ನು ನೇರವಾಗಿ ಕಂಪನಿಯಿಂದಲೇ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಆಫರ್‌ಗಳನ್ನು ನೀಡಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾಷ್ ಬ್ಯಾಕ್
ಆನ್‌ಲೈನ್ ಮಾರುಕಟ್ಟೆಯನ್ನು ಭಾರತದ ಗ್ರಾಹಕರಿಗೆ ಪರಿಚಿಸುವ ಸಲುವಾಗಿ ಆ್ಯಪಲ್ ಕಂಪನಿ ಹಲವು ಆಫರ್‌ಗಳನ್ನು ನೀಡಿದೆ. ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೂಲಕ 20,900 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಉತ್ಪನ್ನಗಳಿಗೆ ಶೇಕಡಾ 6 ರಷ್ಟು ಕ್ಯಾಶ್ ಬ್ಯಾಕ್ (ಗರಿಷ್ಠ 10,000 ರೂ.) ನೀಡುವ ಕೊಡುಗೆ ನೀಡಿದೆ.
ಹಣಪಾವತಿಯ ಬಹು ಆಯ್ಕೆ ಮತ್ತು ಇಎಂಐ ಆಯ್ಕೆಗಳು
ಗ್ರಾಹಕರು ಕ್ರೆಡಿಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಎಂಐ, ರೂಪೇ, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಉತ್ಪನ್ನ ಡೆಲಿವರಿ ಮಾಡುವ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಆಯ್ಕೆಗಳನ್ನು ನೀಡಲಾಗಿದೆ. ಇಎಂಐ ಆಯ್ಕೆಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳು ಇಲ್ಲದಿರುವುದು ಮತ್ತೊಂದು ವಿಶೇಷವಾಗಿದೆ. ತಮ್ಮ ಕ್ರೆಡಿಟ್ ಕಾರ್ಡ್ ಆಧಾರದ ಮೇಲೆ ತಿಂಗಳ ಪಾವತಿಗಳನ್ನ ಲೆಕ್ಕಹಾಕುವ ಅವಕಾಶವನ್ನು ನೀಡಲಾಗಿದೆ. ಸದ್ಯ ದೇಶದಲ್ಲಿರುವ ಮಹಾಮಾರಿ ಕೋವಿಡ್ ಸೋಂಕು ಇರುವುದರಿಂದ ಡೆಲಿವರಿಗೆ ಯಾವುದೇ ರೀತಿಯ ಶುಲ್ಕವಿಲ್ಲ.
ಆ್ಯಪಲ್ ಟ್ರೇಡ್-ಇನ್
ಆ್ಯಪಲ್ ವೆಬ್‌ಸೈಟ್ ಮೂಲಕ ನೇರವಾಗಿ ಉತ್ಪನ್ನಗಳನ್ನು ಖರೀದಿಸಿದರೆ ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್‌ಗಳನ್ನು ಎಕ್ಸ್‌ಚೇಂಜ್ ಕೂಡ ಮಾಡಿಕೊಳ್ಳಬಹುದಾಗಿದೆ. ತಮ್ಮ ತಿಂಗಳ ಪಾವತಿಗಳನ್ನು ಕೂಡ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಎಕ್ಸ್‌ಚೇಂಜ್ ಮಾಡಿಕೊಳ್ಳುವ ಸ್ಮಾರ್ಟ್ ಫೋನ್ ಬಗ್ಗೆ ಗ್ರಾಹಕರು ಕೇವಲ ಬ್ರಾಂಡ್, ಮಾಡೆಲ್ ಹಾಗೂ ಅದರ ಗುಣಮಟ್ಟವನ್ನು ತಿಳಿಸಿದರೆ ಸಾಕು. ಅದರ ಮೌಲ್ಯವನ್ನು ಅಲ್ಲೇ ನೀಡಲಾಗುತ್ತದೆ. ಹೊಸ ಐಫೋನ್ ಡೆಲಿವರಿ ಮಾಡುವ ವೇಳೆ ಎಕ್ಸ್‌ಚೇಂಜ್ ಮಾಡುವ ಫೋನ್ ಅನ್ನು ಕೂಡ ವಾಪಸ್ ತೆಗೆದುಕೊಳ್ಳಲಾಗುತ್ತದೆ.
ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌ಗೆ 35,000 ವರಗೆ ಆಫರ್ ನೀಡಲಾಗಿದೆ. ಐಫೋನ್ ಎಕ್ಸ್‌ಆರ್‌ಗೆ 24,000 ಹಾಗೂ ಇತರ ಫೋನ್‌ಗಳ ಆಫರ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಂದು ವೇಳೆ ಗ್ರಾಹಕರ ಬಳಿ ಇರುವ ಸ್ಮಾರ್ಟ್ ಫೋನ್ ತೀರಾ ಹಳೆಯದಾಗಿದ್ದರೆ, ಅದನ್ನು ಎಕ್ಸ್‌ಚೇಂಜ್‌ಗೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅಂತಹ ಫೋನ್‌ಗಳ ಮರುಬಳಕೆಗಾಗಿ ಉಚಿತ ಸರ್ವೀಸ್‌ಗಳನ್ನು ನೀಡಲಿದೆ.
ವಿದಾರ್ಥಿಗಳು, ಉಪನ್ಯಾಸಕರಿಗೆ ವಿಶೇಷ ರಿಯಾಯಿತಿ
ಒಂದು ವೇಳೆ ವಿಶ್ವವಿದ್ಯಾಲಯಕ್ಕಾಗಿ ಗ್ರಾಹಕ ಆ್ಯಪಲ್ ವಸ್ತುಗಳನ್ನು ಖರೀದಿಸಿದರೆ. ಆತ ಹೆಚ್ಚವರಿ ಉಳಿತಾಯದ ಆಫರ್‌ಗಳಿಗೆ ಅರ್ಹರಾಗಿರುತ್ತಾರೆ. ಶಿಕ್ಷಣ ಸಂಬಂಧಿತ ಕಾರ್ಯಚಟುವಟಿಕೆಗಳಿಗಾಗಿ ಹೊಸ ಮ್ಯಾಕ್ ಖರೀದಿಸಿದರೆ 23,990 ರೂಪಾಯಿ ವರಿಗೆ ಉಳಿತಾಯದ ಅವಕಾಶ ನೀಡಲಾಗಿದೆ. ನ್ಯೂ ಐಪಾಡ್ ಮೇಲೆ 7,445 ರೂಪಾಯಿ ವರೆಗೆ ರಿಯಾಯಿತಿ ಸಿಗಲಿದೆ. ಹೆಚ್ಚುವರಿ ಮೆಮೋರಿ, ಹೆಚ್ಚುವರಿ ಗ್ರಾಫಿಕ್ಸ್, ಸ್ಟೋರೇಜ್ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಆಯ್ದ ಉತ್ಪನ್ನಗಳ ಖರೀದಿಗೆ ಗಿಫ್ಟ್ ಕಾರ್ಡ್‌ಗಳನ್ನು ನೀಡಲಿದೆ.