ನವದೆಹಲಿ: ಆಹಾರ ವಿತರಣಾ ಸಂಸ್ಥೆಗೆ ಪೈಪೋಟಿ ನೀಡಲು ದಿಗ್ಗಜ ಕಂಪನಿ ಮುಂದಾಗಿದ್ದು, ಸದ್ಯದಲ್ಲೇ ಫುಡ್ ಡೆಲಿವರಿ ಸೇವೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ವಿವಿಧ ರೀತಿಯ ವಸ್ತುಗಳನ್ನು ಗ್ರಾಹಕರಿಗೆ ವಿತರಿಸಿ ನಂಬಿಕೆ ಪಡೆದಿರುವ ಅಮೆಜಾನ್ ಸಂಸ್ಥೆ ಭಾರತದಲ್ಲಿ ಆಹಾರ ವಿತರಣಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾಗಿದೆ.
ಸೆಪ್ಟೆಂಬರ್ನಿಂದ ಹಲವು ತಿಂಗಳುಗಳ ಕಾಲ ಭಾರತದಲ್ಲಿ ವಿವಿಧ ಸಮುದಾಯದ ಹಬ್ಬಗಳು ನಡೆಯಲಿದ್ದು, ಇದನ್ನೇ ಗುರಿಯಾಗಿಸಿ ಅಮೆಜಾನ್ ಫುಡ್ ಡೆಲಿವರಿಯನ್ನು ಭಾರತದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ.
ಭಾರತದಲ್ಲಿ ಆನ್ಲೈನ್ ಫುಡ್ ಡೆಲಿವರಿ ಕ್ಷೇತ್ರದಲ್ಲಿನ ಆದಾಯ ಹೆಚ್ಚಳವಾಗುತ್ತಿದ್ದು ಇದನ್ನು ಗಮನಿಸಿರುವ ಅಮೆಜಾನ್ ಸಂಸ್ಥೆ ಈ ಕ್ಷೇತ್ರಕ್ಕೂ ಕಾಲಿಡಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ.
ಪ್ರಸ್ತುತ ಭಾರತದಲ್ಲಿ ಜೊಮ್ಯಾಟೋ, ಸ್ವಿಗ್ಗಿ, ಉಬರ್ ಈಟ್ಸ್ಗಳು ಜನಪ್ರಿಯತೆ ಪಡೆದಿದ್ದು, ಅಮೆಜಾನ್ ಎಂಟ್ರಿ ಮೂಲಕ ಈ ಸಂಸ್ಥೆಗಳಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.