ಮುಂಬೈ : ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಮುಂಗಡ ತೆರಿಗೆ ಸಂಗ್ರಹವು ಶೇ.31ರಷ್ಟು ಕುಸಿದಿದೆ. ಮುಂಗಡ ಕಾರ್ಪೊರೇಟ್ ತೆರಿಗೆ ಶೇ.79ರಷ್ಟು ಕುಸಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಒಟ್ಟು ನೇರ ತೆರಿಗೆ ಸಂಗ್ರಹವು 1,37,825 ಕೋಟಿ ರೂಪಾಯಿಗೆ ತಲುಪಿದೆ. ಇದು 2019ರ ಜೂನ್ ತ್ರೈಮಾಸಿಕದಲ್ಲಿ ₹1,99,755 ಕೋಟಿಗಳಷ್ಟಿತ್ತು" ಎಂದು ಆದಾಯ ತೆರಿಗೆ ಅಧಿಕಾರಿ ತಿಳಿಸಿದ್ದಾರೆ.
ಜೂನ್ ತ್ರೈಮಾಸಿಕದ ಮೊದಲ ಎರಡು ತಿಂಗಳಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿತ್ತು. ಇದು ದೇಶದ ಶೇ.80ರಷ್ಟು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು.
ಜೂನ್ 1ರಿಂದ ಲಾಕ್‌ಡೌನ್‌ನ ಹಂತಹಂತವಾಗಿ ತೆಗೆದುಹಾಕಲಾಗಿದ್ರೂ ಆರ್ಥಿಕತೆಯು ಇನ್ನೂ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಮುಂಗಡ ತೆರಿಗೆ ಪಾವತಿಸಲು ಜೂನ್ 15 ಕೊನೆಯ ದಿನವಾಗಿತ್ತು.