ನವದೆಹಲಿ: ಗರಿಷ್ಠ ಮುಖಬೆಲೆಯ ₹ 500 ಹಾಗೂ ₹ 1,000 ನೋಟು ರದ್ದುಪಡಿಸಿ ಇಂದಿಗೆ ಮೂರು ವರ್ಷಗಳಾಗುತ್ತವೆ. ಇತ್ತೀಚೆಗೆ ಈ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಮೂರನೇ ಒಂದು ಭಾಗದಷ್ಟು ಜನರು ನೋಟುರದ್ದತಿಯು ಆರ್ಥಿಕ ಕುಸಿತಕ್ಕೆ ಕಾರಣ ಎಂದೂ ಹಾಗೂ ಅತಿದೊಡ್ಡ ಋಣಾತ್ಮಕ ಪರಿಣಾಮ ಎಂದು ವಿಶ್ಲೇಷಿಸಿದ್ದಾರೆ.
ಆನ್‌ಲೈನ್ ಸಮುದಾಯ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, 28 ಪ್ರತಿಶತದಷ್ಟು ಜನರು ಇದು ಯಾವುದೇ ಋಣಾತ್ಮಕ ಪರಿಣಾಮಗಳನ್ನು ಬೀರಿಲ್ಲ ಎಂದಿದ್ದಾರೆ. ಸುಮಾರು 32 ಪ್ರತಿಶತದಷ್ಟು ಜನರು ನೋಟ್ ಬ್ಯಾನ್ ನಮ್ಮ ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನೋಟು ನಿಷೇಧ ಜಾರಿಯಾಗಿ 3 ವರ್ಷಗಳು ಆಗುತ್ತಿರುವ ಪ್ರಯುಕ್ತ ದೇಶಾದ್ಯಂತ ಸುಮಾರು 50,000 ಪ್ರತಿಸ್ಪಂದಕರನ್ನು ಆಯ್ಕೆ ಮಾಡಿ ಸಮೀಕ್ಷೆಗೆ ಒಳಪಡಿಸಲಾಯಿತು. ನೋಟ್ ಬ್ಯಾನ್ ಶೇ 42ರಷ್ಟು ಜನರು ತೆರಿಗೆ ವಂಚನೆ ತಪ್ಪಿಸಿಕೊಳ್ಳುವುದನ್ನು ನಿಯಂತ್ರಣವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. 25 ಪ್ರತಿಶತದಷ್ಟು ಜನರು ಇದು ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 21 ಪ್ರತಿಶತದಷ್ಟು ಜನರು ನೋಟು ನಿಷೇಧವು ಆರ್ಥಿಕತೆಯಲ್ಲಿ ಕಪ್ಪು ಹಣದ ಹರಿವನ್ನು ಕಡಿಮೆ ಮಾಡಿದೆ ಎಂದಿದ್ದರೆ, 12 ಪ್ರತಿಶತದಷ್ಟು ಜನರು ನೇರ ತೆರಿಗೆ ಸಂಗ್ರಹ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಆರ್ಥಿಕ ವ್ಯವಸ್ಥೆಯಲ್ಲಿನ ಕಪ್ಪು ಹಣ ನಿಗ್ರಹಿಸಲು ಕೇಂದ್ರ ಸರ್ಕಾರವು 2016ರ ನವೆಂಬರ್ 8ರಂದು ₹ 500 ಹಾಗೂ ₹ 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಾಗಿ ಘೋಷಿಸಿತ್ತು. 500 ರೂ. ಮತ್ತು ₹ 1,000 ಮುಖಬೆಲೆಯ 15.41 ಲಕ್ಷ ಕೋಟಿ ರೂ. ಮತ್ತು 15.31 ಲಕ್ಷ ಕೋಟಿ ರೂ.ನಷ್ಟು ಅಂದರೆ ಶೇ 99.3ರಷ್ಟು ಹಣ ಬ್ಯಾಂಕ್ಗಳಿಗೆ ವಾಪಸ್ ಆದವು. ₹ 10,720 ಕೋಟಿ ರೂ. ಮೌಲ್ಯದಷ್ಟು ಕಪ್ಪು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಲಿಲ್ಲ.