ರಾಯಚೂರು: ಪ್ರಸಕ್ತ ಸಾಲಿನಿಂದ ನೂತನವಾಗಿ ಆರಂಭವಾಗಲಿರುವ ರಾಯಚೂರು ವಿಶ್ವವಿದ್ಯಾಲಯದಲ್ಲಿ ಯರಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ತಾಲೂಕಿನ ಯರಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಮ್ಮ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಇಂದು ಮನವಿ ಸಲ್ಲಿಸಿದರು.
ರಾಯಚೂರು ಸ್ನಾತಕೋತ್ತರ ಕೇಂದ್ರಕ್ಕೆ 30 ವರ್ಷಗಳ ಹಿಂದೆ ಯರಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಂದ ಸುಮಾರು 250 ಎಕರೆ ಜಮೀನು ಪಡೆಯಲಾಗಿದೆ. ಈಗ ಇದನ್ನು ವಿಶ್ವವಿದ್ಯಾಲಯವನ್ನಾಗಿ ಮಾಡುತ್ತಿರುವುದು ಶ್ಲಾಘನೀಯ.
ಇನ್ನೇನು ವಿವಿ ಅರಂಭವಾಗಲಿದ್ದು, ಇದಕ್ಕೆ ಸುತ್ತಮುತ್ತಲಿನ ಗ್ರಾಮದ ಅರ್ಹ ಯುವಕ, ಯುವತಿಯರಿಗೆ ಸಿ ಮತ್ತು ಡಿ ವೃಂದದ ಉದ್ಯೋಗ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ಈ ಭಾಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.