ಪುತ್ತೂರು : ಪುತ್ತೂರು ನಗರಸಭಾ ವತಿಯಿಂದ 25ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಕಿಲ್ಲೆ ಮೈದಾನದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗಿಡಗಳನ್ನು ನೆಡುವ ಜೊತೆಗೆ ಅದನ್ನು ಉಳಿಸಿ, ಬೆಳೆಸುವುದು ಅತೀ ಅಗತ್ಯ. ಹಾಳಾಗುತ್ತಿರುವ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಜನತೆ ವಹಿಸಬೇಕು. ತಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಗಿಡಗಳನ್ನು ಬೆಳೆಸುವ ಮೂಲಕ ನಾಡಿನ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.
ನಗರಸಭೆಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ಕಿಲ್ಲೆ ಮೈದಾನ ಸುತ್ತ ಗಿಡಗಳನ್ನು ನೆಡಲಾಯಿತು. ಈ ವೇಳೆ ನಗರಸಭೆಯ ಪರಿಸರ ಎಂಜಿನಿಯರ್ ಗುರುಪ್ರಸಾದ್, ನಗರಸಭಾ ಆರೋಗ್ಯ ಇಲಾಖೆ ಅಧಿಕಾರಿ ರಾಮಚಂದ್ರ, ಶ್ವೇತಾ ಕಿರಣ್, ರಾಜೇಶ್ ನಾಯ್ಕ್ ಹಾಗೂ ನಗರಸಭಾ ಅಧಿಕಾರಿ ವರ್ಗ, ಸಿಬ್ಬಂದಿ ಭಾಗವಹಿಸಿದ್ದರು.