ಲಂಡನ್: ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಭಾರತ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದ ಹಾರ್ದಿಕ್ ಪಾಂಡ್ಯರನ್ನು 1999 ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಲಾನ್ಸ್ ಕ್ಲೂಸ್ನರ್ರಿಗೆ ಆಸೀಸ್ ಮಾಜಿ ನಾಯಕ ಸ್ಟಿವ್ ವಾ ಹೋಲಿಕೆ ಮಾಡಿದ್ದಾರೆ.
1999ರ ವಿಶ್ವಕಪ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಲಾನ್ಸ್ ಕ್ಲೂಸ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2019ರ ವಿಶ್ವಕಪ್ನಲ್ಲಿ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಅದೇ ರೀತಿ ಪ್ರದರ್ಶನ ನೀಡಲಿದ್ದಾರೆ. ಇವರನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ವಾ ಭವಿಷ್ಯ ನುಡಿದಿದ್ದಾರೆ.
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ಗೆ ಬಂದರೆ ಸ್ಪಿನ್ನರ್ಗಳನ್ನು ನಡುಗುವಂತೆ ಮಾಡುತ್ತಾರೆ. ಹಾರ್ದಿಕ್ ಬಾಲ್ಗಳನ್ನ ಸಿಕ್ಸರ್ಗಟ್ಟುವುದನ್ನು ನೋಡಿದರೆ ಕ್ಲೂಸ್ನರ್ ನೆನೆಪಿಗೆ ಬರುತ್ತಾರೆ ಎಂದು 20 ವರ್ಷದ ಹಿಂದಿನ ಘಟನೆಯನ್ನು ಐಸಿಸಿ ವೆಬ್ಸೈಟ್ಗೆ ಬರೆದಿರುವ ಲೇಖನದಲ್ಲಿ ಪಾಂಡ್ಯರನ್ನು ಗುಣಗಾಣ ಮಾಡಿದ್ದಾರೆ ವಾ.
1999 ವಿಶ್ವಕಪ್ನಲ್ಲಿ ಲಾನ್ಸ್ ಕ್ಲೂಸ್ನರ್ 122.17 ರ ಸ್ಟ್ರೈಕ್ ರೇಟ್ನಲ್ಲಿ 281 ರನ್ ಹಾಗೂ 17 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಧೋನಿ ಆಟಕ್ಕೂ ಮೆಚ್ಚುಗೆ:
ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯನ್ನು ಮೆಚ್ಚಿಕೊಂಡಿರುವ ಸ್ಟಿವ್ ವಾ, ಕೊನೆಯ ಓವರ್ಗಳಲ್ಲಿ ಧೋನಿ ಉತ್ತಮವಾಗಿ ಆಡುತ್ತಾರೆ. ಅವರು ಕೊನೆಯ ಓವರ್ಗಳಲ್ಲಿ ವಿಫಲವಾಗುವುದು ತುಂಬಾ ಕಡಿಮೆ. ಆಸ್ಟ್ರೇಲಿಯಾ ವಿರುದ್ಧವೂ 350 ರನ್ಗಳ ಗಡಿ ದಾಟಲು ಅವರೇ ಕಾರಣರಾಗಿದ್ದರು ಎಂದು 14 ಎಸೆತಗಳಲ್ಲಿ 27 ರನ್ ಗಳಿಸಿದ್ದ ಧೋನಿಯನ್ನು ಹೊಗಳಿದ್ದಾರೆ.