ನವದೆಹಲಿ: ಸಕ್ರಿಯ ರಾಜಕಾರಣಕ್ಕೆ ಮರಳಿರುವ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ವಾದ್ರಾ ಹೈ-ವೋಲ್ಟೇಜ್ ಕ್ಷೇತ್ರದಿಂದ ಈ ಬಾರಿಯ ಸಂಸತ್ ಚುನವಾಣೆ ಎದುರಿಸಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷ ವಾರಣಾಸಿ ಕ್ಷೇತ್ರದಿಂದ ತನ್ನಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ವಾದ್ರಾ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದು ಸದ್ಯ ಲೋಕಸಮರವನ್ನು ಮತ್ತಷ್ಟು ರಂಗೇರಿಸುವ ಲಕ್ಷಣ ತೋರಿದೆ.
ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿ ಆಯ್ಕೆ ಬಯಸಿ ಸ್ಪರ್ಧೆ ಮಾಡುತ್ತಿದ್ದಾರೆ. ಮೋದಿ ಸ್ಪರ್ಧೆಯಿಂದಲೇ ವಾರಣಾಸಿ ಲೋಕಸಭಾ ಕ್ಷೇತ್ರ ದೇಶದಲ್ಲೇ ಗಮನ ಸೆಳೆದಿದ್ದು, ಒಂದು ವೇಳೆ ಪ್ರಿಯಾಂಕ ಗಾಂಧಿ ವಾದ್ರಾ ಮೋದಿ ವಿರುದ್ಧ ನಿಂತಿದ್ದೇ ಆದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಬಹುದು.
ವಾರಣಾಸಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಇನ್ನೂ ಮೌನ ವಹಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲ ವಿಚಾರಗಳು ಅಂತಿಮಗೊಂಡ ಬಳಿಕವಷ್ಟೇ ಖಚಿತವಾಗಿ ಹೇಳಬಹುದು ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಅಲಹಾಬಾದ್ ಹಾಗೂ ವಾರಣಾಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಂತರಿಕ ವಲಯ ಒಂದು ಸಮೀಕ್ಷೆ ನಡೆಸಿದ್ದು ಈ ಮೂಲಕ ಪಕ್ಷದ ಪ್ರಭಾವ ಈ ಎರಡೂ ಕ್ಷೇತ್ರದಲ್ಲಿ ಎಷ್ಟಿದೆ ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
2014ರಲ್ಲೇ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇರಾದೆಯನ್ನು ಪ್ರಿಯಾಂಕ ಗಾಂಧಿ ವಾದ್ರಾ ಹೊಂದಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ವರ್ಷದ ಆರಂಭದಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕ, ಪ್ರಸ್ತುತ ಪೂರ್ವ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ.