ಕೊಪ್ಪಳ : 3 ಸಾವಿರ ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ರಾಜ್ಯ ಸರ್ಕಾರ ಜಿಂದಾಲ್ಗೆ ನೀಡಲು ಮುಂದಾಗಿದೆ. ಸರ್ಕಾರದ ಈ ನಡೆಯನ್ನು ಕೇವಲ ಬಿಜೆಪಿ ಮಾತ್ರವಲ್ಲ, ಪಕ್ಷಾತೀತವಾಗಿ ಎಲ್ಲರೂ ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ಕನಕಪುರದಲ್ಲಿನ ತಮ್ಮ ಆಸ್ತಿಯನ್ನು ಬೇಕಾದರೆ ಮಾರಾಟ ಮಾಡಲಿ. ರಾಜ್ಯದ ಆಸ್ತಿ ಮಾರಾಟ ಮಾಡುವ ಹಕ್ಕನ್ನು ಇವರಿಗೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.
ಹೀಗೆ ಬಿಟ್ಟರೆ ರಾಜ್ಯದ ಆಸ್ತಿ ಮತ್ತು ವಿಧಾನಸೌಧವನ್ನು ಅವರು ಮಾರಾಟ ಮಾಡುತ್ತಾರೆ. ಬಳ್ಳಾರಿಯಿಂದ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಎಲ್ಲಿ ಹೋದರು? ಭೂಮಿ ನೀಡುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಸಂದರ್ಭ ಮುಖಂಡರನ್ನು ಅರೆಸ್ಟ್ ಮಾಡಲಾಗಿದೆ. ಇದಕ್ಕೆ ನಾವು ಹೆದರೋಲ್ಲ. ಸರ್ಕಾರದ ಆಸ್ತಿ ಉಳಿಸಲು ಬಿಜೆಪಿಯವರು ರಾಜ್ಯದ ಎಲ್ಲ ಜೈಲುಗಳನ್ನು ಭರ್ತಿ ಮಾಡುತ್ತೇವೆ ಎಂದು ಗುಡುಗಿದರು.
ಜಿಂದಾಲ್ಗೆ ಭೂಮಿ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸರ್ವಪಕ್ಷ ಸಭೆ ಕರೆಯುವುದಾಗಿ ಕೇವಲ ಹೇಳಿಕೆ ಕೊಡುವುದಲ್ಲ. ವಿರೋಧ ಮಾಡುವ ಎಲ್ಲಾ ಪಕ್ಷದ, ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸಭೆಗೆ ಕರೆಯಬೇಕು. ಸಿಎಂ ಕುಮಾರಸ್ವಾಮಿ ಮಾಧ್ಯಮದ ವಿರುದ್ಧ ಹೋಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದು ಹೀಗೆ ಮುಂದುವರೆದರೆ ಅವರು ಸಿಎಂ ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.