ಬಾಗಲಕೋಟೆ : ಯಾರು ಏನೇ ವಿರೋಧ ಮಾಡಿದರೂ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಸ್ಪಷ್ಟಪಡಿಸಿದ್ದಾರೆ. ಕಳೆದ ದಿನ ಮಾಜಿ ಸಚಿವ ಹೆಚ್ ವೈ ಮೇಟಿ ಅವರು ತೆರವುಗೊಳಿಸುವ ಕಾರ್ಯಕ್ಕೆ ವಿರೋಧ ಮಾಡಿರುವ ಹಿನ್ನೆಲೆ ಈ ಸ್ಪಷ್ಟನೆ ನೀಡಿದ್ದಾರೆ.
ನಗರ ಸೌಂದರ್ಯಗೊಳಿಸುವುದು ಹಾಗೂ ಸ್ಲಮ್ ಮುಕ್ತಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೋರಾಟ ಮಾಡುವವರು ಮಾಡಲಿ, ನಾವು ಹೋರಾಟ ಮಾಡಿಯೇ ಬಂದಿದ್ದೇವೆ. ನಮ್ಮ ಆದ್ಯತೆ ಮೊದಲು ಅಭಿವೃದ್ಧಿಗೆ ಎಂದಿದ್ದಾರೆ.
ಹಳೇ ನಗರದಲ್ಲಿ ಅಕ್ರಮ ಕಟ್ಟಡ ಹೊಂದಿರುವವರು ಸ್ವಯಂ ತೆರವುಗೊಳಿಸಿ ಇಲ್ಲವೇ ಜೆಸಿಬಿ ಬರುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಬಿಟಿಡಿಎಗೆ ಬಂದಿರೋದು ಸರ್ಕಾರದ ಅನುದಾನ.
ಹೀಗಾಗಿ, ಆ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ. ಜನಪ್ರತಿನಿಧಿ ಆದವರು ಅಭಿವೃದ್ಧಿ ಮಾಡಿ ಬಡವರಿಗೆ, ಸಾಮಾನ್ಯ ಜನತೆಗೆ ಸೌಲಭ್ಯ ಒದಗಿಸಿ ಕೂಡಬೇಕು ಎಂದು ಟಾಂಗ್ ನೀಡಿದರು.