ಹೊಸಪೇಟೆ: ನಗರವು ಸಮಸ್ಯೆಗಳ ಆಗರವಾಗಿದ್ದು, ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಾರಿಗಳು ನಗರದ ಹುಡಾ ಅಧ್ಯಕ್ಷ ಅಶೋಕ ಜೀರೆ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆ, ಪ್ರಾಧಿಕಾರ ಸೇರಿದಂತೆ ಎಲ್ಲಾ ಇಲಾಖೆಗಳ ಸಹಮತ ಹಾಗೂ ಸಹಭಾಗಿತ್ವದೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಬೇಕು. ಪ್ಲಾಸ್ಟಿಕ್ ನಿಷೇಧ, ಪರಿಸರ ಸಂರಕ್ಷಣೆ, ಕಸ ನಿರ್ವಹಣೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಪ್ರಗತಿ ಮತ್ತು ಯುವ ಜನರಿಗೆ ಉದ್ಯೋಗ ಒದಗಿಸುವಂತಹ ಪೂರಕ ಚಟುವಟಿಕೆಗಳು ನಡೆಯುವ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇಲಾಖೆವಾರು ಅಧಿಕಾರಿಗಳ ಸಲಹೆ ಸೇರಿದಂತೆ ನಗರದ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸರಣಿ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.