ಕ್ಯಾಲಿಫೋರ್ನಿಯಾ: ಸ್ಮಾರ್ಟ್ಫೋನ್ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ಗಳ ದಾಸರಾಗಿದ್ದಾರೆ. ಅರೆಕ್ಷಣ ಮೊಬೈಲ್ ಬಿಟ್ಟಿರುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮೊಬೈಲ್ಗೆ ಇಂದಿನ ಜನತೆ ಅಡಿಕ್ಟ್ ಆಗಿದ್ದಾರೆ.
ತಿಂಡಿ-ಊಟದ ವೇಳೆಯಲ್ಲೂ ಮೊಬೈಲ್ ಪಕ್ಕದಲ್ಲೇ ಇರಲೇಬೇಕು ಮತ್ತು ಆಗಾಗ್ಗೆ ಅದನ್ನ ನೋಡುತ್ತಿದ್ದರೆ ಏನೋ ಒಂದು ಸಮಾಧಾನ. ನೀವು ಆಹಾರ ಸೇವನೆ ವೇಳೆ ಮೊಬೈಲ್ ದೂರವಿಟ್ಟರೆ ಉಚಿತವಾಗಿ ಪಿಜ್ಜಾ ತಿನ್ನಬಹುದು.
ಹೌದು, ಆಹಾರ ಸೇವನೆ ವೇಳೆ ಮೊಬೈಲ್ಗೆ ಬಾಯ್ ಬಾಯ್ ಹೇಳಿದರೆ ಪಿಜ್ಜಾ ಉಚಿತವಾಗಿ ನೀಡುತ್ತೇವೆ ಎಂದು ಕ್ಯಾಲಿಫೋರ್ನಿಯಾದ 'ಕರಿ ಪಿಜ್ಜಾ ಕಂಪನಿ' ಹೇಳಿದೆ. ಆದರೆ ಒಂದು ಷರತ್ತು ಇದೆ.
ಒಬ್ಬರೇ ಹೋಗಿ ಮೊಬೈಲ್ ದೂರವಿಟ್ಟರೆ ನಿಮಗೆ ಫ್ರೀ ಪಿಜ್ಜಾ ದಕ್ಕುವುದಿಲ್ಲ. ಕಂಪನಿಯ ನಿಯಮದಂತೆ ನಾಲ್ವರ ಒಂದು ಗುಂಪು ಮೊಬೈಲ್ ಬಳಸದೇ ಆಹಾರ ಸೇವಿಸಿದರೆ ಫ್ರೀ ಪಿಜ್ಜಾ ಸವಿಯಬಹುದು. 'ಟಾಕ್ ಟು ಈಚ್ ಅದರ್ ಡಿಸ್ಕೌಂಟ್' ಎನ್ನುವ ವಿನೂತನ ಯೋಜನೆಯ ಮೂಲಕ ಗ್ರಾಹಕರನ್ನು ತಮ್ಮ ರೆಸ್ಟೋರೆಂಟ್ಗೆ ಆಕರ್ಷಿಸಲು ಕಂಪನಿ ಮುಂದಾಗಿದೆ.
ಮೊಬೈಲ್ ಬಳಕೆ ಕಡಿಮೆ ಮಾಡಿರುವುದರಿಂದ ಆಗುವ ಲಾಭವನ್ನು ಅರಿತು ಸ್ಫೂರ್ತಿಗೊಂಡ ಕಂಪನಿಯ ಸಹಸಂಸ್ಥಾಪಕ ವರೀಂದರ್ ಮಲ್ಹಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಮೊಬೈಲ್ ದೂರವಿರಿಸಿ ಗೆಳೆಯರು, ಫ್ಯಾಮಿಲಿ ಒಟ್ಟಾಗಿ ಮಾತನಾಡುತ್ತಾ ಖುಷಿಯಾಗಿ ಆಹಾರ ಸೇವಿಸಿ ಆ ಸಮಯವನ್ನು ಎಂಜಾಯ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎನ್ನುವುದು ಸಹಸಂಸ್ಥಾಪಕರ ಮಾತು.