ತುಮಕೂರು: ಸಾಮಾನ್ಯವಾಗಿ ರಸ್ತೆಗಳು ಸಾರ್ವಜನಿಕರ ಸಂಚಾರಕ್ಕೆ ಪೂರಕವಾಗಿರಬೇಕು ಎಂಬ ಸದುದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ತುಮಕೂರಿನಲ್ಲೊಂದು ನೂತನವಾಗಿ ನಿರ್ಮಿಸಿರುವ ರಸ್ತೆಯಿದೆ. ಅದರಲ್ಲಿ ಜೀವ ಬಿಗಿ ಹಿಡಿದುಕೊಂಡು ಸಂಚರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ತುಮಕೂರು ಮತ್ತು ಕೊರಟಗೆರೆ ನಡುವಿನ ರಸ್ತೆ. ಮಾರ್ಗದಲ್ಲಿ ಜಂಪೇನಹಳ್ಳಿ ಕ್ರಾಸ್. ಇಲ್ಲಿ ಸಾಕಷ್ಟು ತಿರುವುಗಳಿದ್ದು, ಎರಡು ವರ್ಷಗಳ ಹಿಂದೆ ಈ ಮಾರ್ಗಕ್ಕೆ ಪರ್ಯಾಯವಾಗಿ ಮತ್ತೊಂದು ರಸ್ತೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಗುಡ್ಡವನ್ನ ಕೊರೆದು ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗಿದೆ.
ಈ ರಸ್ತೆಯೇನೋ ಉತ್ತಮವಾಗಿದೆ. ಆದರೆ ಮಳೆ ಬಂತೆಂದರೆ ರಸ್ತೆ ಇಕ್ಕೆಲಗಳಲ್ಲಿ ಗುಡ್ಡ ಕುಸಿದು ಬೀಳುವ ಭಯ ಇದೆ. ಹೀಗಾಗಿ ಜನರು ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ತಡೆಗಟ್ಟಲು ಅಧಿಕಾರಿಗಳು ಗುಡ್ಡದ ಛಾವಣಿಗೆ ಮತ್ತು ಮೇಲ್ಮೈಗೆ ಕಬ್ಬಿಣದ ಬಲೆಗಳನ್ನು ಅಳವಡಿಸಿದ್ದಾರೆ. ಆದರೆ ಆ ಬಲೆ ಮಣ್ಣು ಹಾಗೂ ಕಲ್ಲುಗಳ ಸಮೇತ ಕಿತ್ತು ಹೊರಬರುತ್ತಿವೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಡ್ಡ ಕೊರೆದು ರಸ್ತೆ ಮಾಡುವಂತಹ ಅವೈಜ್ಞಾನಿಕ ಯೋಜನೆ ರೂಪಿಸಿದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಇನ್ನೊಂದೆಡೆ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ಮಳೆ ಬಂತೆಂದರೆ ಜೀವ ಬಿಗಿ ಹಿಡಿದು ವಿಧಿ ಇಲ್ಲದೆ ಸಂಚರಿಸುತ್ತಿದ್ದಾರೆ.
ಇನ್ನು ಮುಂದಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ರಸ್ತೆಗೊಂದು ವೈಜ್ಞಾನಿಕ ಕಾಮಗಾರಿ ಕೈಗೊಂಡು ಜನರಲ್ಲಿನ ಭೀತಿಯನ್ನ ಹೋಗಲಾಡಿಸಬೇಕಾಗಿದೆ.