ಚೆನ್ನೈ: ಕೋವಿಡ್ -19 ಎರಡನೇ ಅಲೆಯಿಂದಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಮೃತರ ಅಂತಿಮ ದರ್ಶನ ಪಡೆಯಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಭಾರತದ ಹಲವಾರು ಕಡೆ ಅಂತ್ಯಕ್ರಿಯೆ ನಡೆಸಲು ಹಣದ ಸಮಸ್ಯೆ ಉಂಟಾಗಿ, ಪವಿತ್ರ ಗಂಗೆಯಲ್ಲಿ ಶವಗಳನ್ನು ಎಸೆಯುವ ದುಸ್ಥಿತಿ ಎದುರಾಗಿದೆ. ಆದ್ರೆ ಇಲ್ಲಿನ ಸಚಿವರೊಬ್ಬರು ಮೃತರ ಅಂತ್ಯಕ್ರಿಯೆಯ ಜವಾಬ್ದಾರಿಯನ್ನು ಹೊತ್ತು ಹೊತ್ತುಕೊಂಡಿದ್ದಾರೆ.
ಹೌದು, ತಮಿಳುನಾಡಿನ ವಿದ್ಯುತ್ ಮತ್ತು ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ ಅವರು, ತಮ್ಮ ಕ್ಷೇತ್ರವಾದ ಕರೂರ್ ಜಿಲ್ಲೆಯಲ್ಲಿ ಕೋವಿಡ್‌ನಿಂದ ನಿಧನರಾದವರ ಅಂತ್ಯಕ್ರಿಯೆ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕರೂರಿನಲ್ಲಿ ಈಗಾಗಲೇ ಕೋವಿಡ್ಗೆ 116 ಜನರು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಬಲಮ್ಮಲ್‌ಪುರಂ ಎಲೆಕ್ಟ್ರಿಕ್ ಶವಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಶವಗಳನ್ನು ದಹನ ಮಾಡುವ ಕಾರ್ಮಿಕರು ಕೋವಿಡ್ಗೆ ತುತ್ತಾಗಿದ್ದರು. ಹಾಗಾಗಿ ಕಳೆದ ಕೆಲವು ದಿನಗಳಿಂದ ಕರೂರ್ ಪುರಸಭೆಯ ಆರೋಗ್ಯ ನಿರೀಕ್ಷಕರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಸಚಿವರು ಸಹ ಈ ರೀತಿಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಸೆಂಥಿಲ್, "ಈ ಶವಾಗಾರದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಅಂತ್ಯ ಸಂಸ್ಕಾರಗಳು ನಡೆಯುತ್ತಿವೆ. ಕೋವಿಡ್ -19 ರಿಂದ ಸಾವನ್ನಪ್ಪಿದ ಜನರ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ನಾನೇ ಭರಿಸುತ್ತಿದ್ದೇನೆ" ಎಂದು ಹೇಳಿದರು.
ಕರೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) 20 ಆಕ್ಸಿಜನ್ ಸಾಂದ್ರಕಗಳನ್ನು ಸಚಿವರು ಹಸ್ತಾಂತರಿಸಿದ್ದಾರೆ. ಇವುಗಳನ್ನು ಅವರ ಪ್ರತಿಷ್ಠಾನ ವಿಎಸ್ಬಿ ಫೌಂಡೇಶನ್ ಮೂಲಕ ಸಂಗ್ರಹಿಸಲಾಗಿದೆ.