ಮೊಹಾಲಿ: ಕನ್ನಡಿಗರ ಪ್ರದರ್ಶನವೇ ನಿರ್ಣಾಯಕವಾಗಿರುವ ಎರಡು ತಂಡಗಳಾದ ರಾಜಸ್ಥಾನ ಹಾಗೂ ಪಂಜಾಬ್ ತಂಡಗಳು ಇಂದು ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ.
ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಪಂಜಾಬ್ ಹಾಗೂ 7 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಗಳು 12ನೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಎರಡು ತಂಡಗಳಲ್ಲೂ ಕರ್ನಾಟಕದ ಪ್ಲೇಯರ್ಸ್ಗಳೆ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಬಲವಿದ್ದರೆ,ರಾಜಸ್ಥಾನ ತಂಡಕ್ಕೆ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಗೋಪಾಲ್ ಹಾಗೂ ಕೆ.ಗೌತಮ್ ಗೇಮ್ ಚೇಂಜರ್ ಆಗಿದ್ದಾರೆ.
ಆಡಿರುವ 8 ಪಂದ್ಯಗಳಲ್ಲಿ ತಲಾ 4 ಸೋಲು-ಗೆಲುವು ಕಂಡಿರುವ ಪಂಜಾಬ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ವಿರುದ್ಧ ಸೋಲನುಭವಿಸಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಎರಡೂ ಪಂದ್ಯಗಳಲ್ಲೂ ಗೆಲುವಿನ ಸನಿಹ ಬಂದು ಎಡವಿರುವ ಪಂಜಾಬ್ ಈ ಪಂದ್ಯದಲ್ಲಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ತವರಿನ ಬೆಂಬಲದೊಂದಿಗೆ ಗೆಲ್ಲುವ ಆಲೋಚನೆಯಲ್ಲಿದೆ.
ಇನ್ನು ರಾಜಸ್ಥಾನ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈಗೆ ಶಾಕ್ ನೀಡಿ ಗೆಲುವಿನ ಹಳಿಗೆ ಮರಳಿದೆ. ಬಟ್ಲರ್ ಫಾರ್ಮ್ಗೆ ಬಂದಿರುವುದು ರಾಜಸ್ಥಾನಕ್ಕೆ ಆನೆ ಬಲ ಬಂದಂತಾಗಿದೆ. ಇನ್ನು ಬೌಲಿಂಗ್ನಲ್ಲಿ ಆರ್ಚರ್,ಗೋಪಾಲ್ ಹಾಗೂ ಕುಲಕರ್ಣಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ಪಂದ್ಯದಲ್ಲಿ ಪಂಜಾಬ್ಗೆ ಕಠಿಣ ಸವಾಲು ನೀಡಲು ಸಿದ್ದವಾಗಿದೆ.
ಮುಖಾಮುಖಿ
ಎರಡು ತಂಡಗಳು ಐಪಿಎಲ್ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ರಾಜಸ್ಥಾನ್ ತಂಡ10ರಲ್ಲಿ ಪಂಜಾಬ್ ತಂಡ 8ರಲ್ಲಿ ಜಯ ಸಾಧಿಸಿವೆ. ಮೊಹಾಳಿಯಲ್ಲಿ ಎರಡು ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಜಯ ಕಂಡಿವೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಆರ್. ಆಶ್ವಿನ್(ನಾಯಕ),ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್ ,ಕೆ.ಎಲ್ ರಾಹುಲ್, ಮಂದೀಪ್ ಸಿಂಗ್,ಮುಜೀಬ್ ಉರ್ ರೆಹಮಾನ್/ ಸಾಮ್ ಕರ್ರನ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್,ಮೊಹಮ್ಮದ್ ಶಮಿ, ಆ್ಯಂಡ್ರ್ಯೂ ಟೈ, ಅಂಕಿತ್ ರಜಪೂತ್
ರಾಜಸ್ಥಾನ್ ರಾಯಲ್ಸ್:
ಅಜಿಂಕ್ಯ ರಹಾನೆ(ನಾಯಕ),ಸ್ಟಿವ್ ಸ್ಮಿತ್,ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಲೈಮ್ ಲಿವಿಂಗ್ಸ್ಟನ್,ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ದವಳ್ ಕುಲಕರ್ಣಿ, ಕೃಷ್ಣಪ್ಪ ಗೌತಮ್, ರಾಹುಲ್ ತ್ರಿಪಾಠಿ