ಶಿವಮೊಗ್ಗ: ಕೊರೊನಾ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯವಾಗಿ ಕೋವಿಡ್ ಸಂಕಷ್ಟದಿಂದ ಜನ ಪಾರಾಗಬೇಕು. ಹೇಗಾದ್ರೂ ಮಾಡಿ ಕೋವಿಡ್ ಪಾಸಿಟಿವಿಟಿಯನ್ನು ಶೇ 5 ರ ಒಳಗೆ ತರಲು ವಿಶೇಷ ಪ್ರಯತ್ನ ಮಾಡಬೇಕು ಅಂತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಶೇ 18 ರಿಂದ 20 ರಷ್ಟು ಇದ್ದ ಪಾಸಿಟಿವಿಟಿ ರೇಟ್ ಅನ್ನು ಈಗ ಶೇ 7ಕ್ಕೆ ತರಲಾಗಿದೆ. ಅದನ್ನು ಶೇ 5 ಇಳಿಸುವ ಯತ್ನ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಅವರು ಇಂದು ಶಿವಮೊಗ್ಗ ನಗರದಲ್ಲಿ ಸಂಚಾರ ನಡೆಸಿದ್ದಾರೆ. ನಗರದ ಅಭಿವೃದ್ದಿ ದೃಷ್ಟಿಯಿಂದ ಪಾರ್ಕ್ ಸೇರಿದಂತೆ ಎಲ್ಲಾ ಅಭಿವೃದ್ದಿಯ ಕುರಿತು ಈಶ್ವರಪ್ಪ ಅವರ ಜೊತೆ ಓಡಾಡಿದ್ದಾರೆ ಎಂದರು.
ಸಿಗಂದೂರು ಬ್ರಿಡ್ಜ್ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣ ಮಾಡಬೇಕು. ಅದರಂತೆ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಣೆ ನಡೆಸಿ, ಕಾಮಗಾರಿಯನ್ನು ಇನ್ನೂ ಒಂದೂವರೆ ವರ್ಷದೊಳಗೆ ಮುಗಿಸಲು ಸೂಚನೆ ನೀಡಲಾಗಿದೆ. ಶಿವಮೊಗ್ಗ ನಗರದ ಹೊರ ವಲಯಕ್ಕೆ ಕುಡಿಯುವ ನೀರಿನ ಯೋಜನೆಗೆ 96 ಕೋಟಿ ರೂ ನೀಡಲಾಗಿದೆ. ಬಸವೇಶ್ವರ ಪುತ್ಥಳಿಯ ಸ್ಥಾಪನೆ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಇಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಕುರಿತು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲೆ ಸಾಕಷ್ಟು ಅಭಿವೃದ್ದಿ ಆಗುತ್ತಿದೆ. ನಮ್ಮ ದೃಷ್ಟಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳು ಅಭಿವೃದ್ದಿಯಾಗಬೇಕು ಎಂಬುದು ಇದೆ. ಆದರೂ ನಮ್ಮ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದರು. ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಆಯುಷ್ ವೈದ್ಯರ ಭತ್ಯೆ ಕುರಿತು ಅನೇಕ ಸಲಹೆ ಬಂದಿದೆ. ಇದನ್ನು ಮುಂದೆ ನೋಡಲಾಗಿದೆ ಎಂದರು. ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ.ದೇವಿಶೆಟ್ಟಿ ರವರು ಸುಧಿರ್ಘವಾಗಿ ಚರ್ಚೆ ನಡೆಸಲಾಗಿದೆ. ಅವರು ನೀಡಿದ ವರದಿ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಡಾ.ದೇವಿಶೆಟ್ಟಿ ಅವರು ಎರಡು ಮೂರು ದಿನಗಳಲ್ಲಿ ವರದಿ ನೀಡಲಿದ್ದಾರೆ ಎಂದರು.