ಬೆಂಗಳೂರು : ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಗಳಲ್ಲಿ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕೊರತೆಯು ಎಫ್ಎಸ್ಎಲ್ ವರದಿ ವಿಳಂಬವಾಗುವುದಕ್ಕೆ ಕಾರಣವಾಗುತ್ತಿದೆ. ಇದು ಆರೋಪಿಗಳು ಖುಲಾಸೆಗೊಳ್ಳಲು ಪೂರಕವಾಗುತ್ತಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಕ್ರಿಮಿನಲ್ ಪ್ರಕರಣಗಳ ನ್ಯಾಯದಾನಕ್ಕೆ ಎಫ್ಎಸ್ಎಲ್ ಕೇಂದ್ರಗಳ ವಿಳಂಬ ವರದಿಗಳು ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಈ ಕುರಿತು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತು.
ಈ ಮೇರೆಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ಹಿಂದಿನ ಆದೇಶದಂತೆ ಕಾಲಮಿತಿಯಲ್ಲಿ ಖಾಲಿ ಹುದ್ದೆಗಳ ಭರ್ತಿ ಹಾಗೂ ಉಪಕರಣಗಳ ಖರೀದಿ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರ ಹೀಗೆ ಇಷ್ಟು ದೀರ್ಘಾವಧಿಯ ಕಾಲಮಿತಿ ಹಾಕಿಕೊಂಡರೆ ಕಷ್ಟ. ಎಫ್ಎಸ್ಎಲ್ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ. ಸರ್ಕಾರ ಇಂತಹ ಕಾರ್ಯಗಳಿಗೆ ಸಂಪನ್ಮೂಲ ವ್ಯಯ ಮಾಡಲು ಮೀನಾಮೇಷ ಎಣಿಸಿದರೆ ಹೇಗೆ ಎಂದು ಕಟುವಾಗಿ ಪ್ರಶ್ನಿಸಿತು. ಅಲ್ಲದೆ, ಸರ್ಕಾರದ ಇಂತಹ ಕ್ರಮಗಳಿಂದಾಗಿಯೇ ಎಫ್ಎಸ್ಎಲ್‌ಗಳು ನೀಡುವ ವರದಿಗಳು ವಿಳಂಬವಾಗುತ್ತಿವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆ ಕುಸಿಯುತ್ತಿದೆ, ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು.
ಸರ್ಕಾರದ ಪರ ವಕೀಲರು ಸಮಜಾಯಿಷಿ ನೀಡಿ, ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. ಹಣಕಾಸು ಇಲಾಖೆಯೂ ಅನುಮೋದನೆ ನೀಡಿದೆ. ಆದರೆ, ಕೋವಿಡ್ ಪರಿಣಾಮ ರಾಜ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸದ್ಯಕ್ಕೆ ಯಾವುದೇ ಹೊಸ ನೇಮಕಾತಿ ಮಾಡುತ್ತಿಲ್ಲ. ಎಫ್ಎಸ್ಎಲ್ ಕೇಂದ್ರಗಳಿಗೆ ಅಗತ್ಯವಿರುವ ಸಾಧನಗಳ ಖರೀದಿಗೆ, ಮೂಲಸೌಕರ್ಯ ಒದಗಿಸಲಿಕ್ಕೆ ಕೇಂದ್ರ ಹಾಗೂ ರಾಜ್ಯ 60:40ರಂತೆ ಖರ್ಚು ನೀಡಬೇಕು. ಕೇಂದ್ರದ ಪಾಲು ಬಂದರೆ ರಾಜ್ಯವೂ ಖರ್ಚು ನೀಡಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬೇರೆ ಯೋಜನೆಗಳಲ್ಲಿ ಮಾಡುವಂತೆ ಮೊದಲು ನೀವು ಖರ್ಚು ಮಾಡಿ ನಂತರ ಬೇಡಿಕೆ ಇಡಿ. ಆಗ ಕೇಂದ್ರ ತನ್ನ ಪಾಲಿನ ಆರ್ಥಿಕ ನೆರವು ನೀಡುವುದಿಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೇ, ಈ ಸಂಬಂಧ ಜೂನ್ 17ರಂದು ಸರ್ಕಾರಕ್ಕೆ ಮಧ್ಯಂತರ ನಿರ್ದೇಶಗಳನ್ನು ನೀಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದೇ ವೇಳೆ ಕೆಎಸ್ಎಲ್ಎಸ್ಎ ಪರ ವಕೀಲ ವೆಂಕಟೇಶ್ ಅರಬಟ್ಟಿ ಮಾಹಿತಿ ನೀಡಿ, ಈ ಹಿಂದೆ ಎಫ್‌ಎಸ್‌ಎಲ್ ನಿರ್ದೇಶಕರು ಸಲ್ಲಿಸಿದ್ದ ಪ್ರಮಾಣಪತ್ರಕ್ಕೂ, ಇದೀಗ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಮಾಹಿತಿಗೂ ವ್ಯತ್ಯಾಸವಿದೆ. ಸರ್ಕಾರ ಆ ವ್ಯತ್ಯಾಸಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದರು.