ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಅಷ್ಟೊಂದು ಆಶಾದಾಯಕವಾಗಿ ಬಂದಿಲ್ಲ. ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆ ಬರುತ್ತದೆ. ಈ ಬಾರಿ ಭರಣಿ ಮಳೆ ಕೈಕೊಟ್ಟ ಹಿನ್ನೆಲೆ ರೈತರಿಗೆ ನಿರಾಶೆ ಮೂಡಿಸಿದೆ. ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ. ಆದರೆ, ಈ ಬಾರಿ ಸುರಿದಿರುವ ಮಳೆಯ ಪ್ರಮಾಣ ನೋಡಿದರೆ ವಾಡಿಕೆ ಮತ್ತು ವಾಸ್ತವಿಕ ಮಳೆಗಿಂತ ಅತಿ ಕಡಿಮೆ ಮಳೆ ಬಂದಿದೆ.
ಬಿತ್ತನೆ ಕಾರ್ಯ ಮಾಡುತ್ತಿರುವ ರೈತರಿಗೆ ಮಹಾಮಾರಿ ಕೊರೊನಾ ಸೋಂಕು ಹೊಡೆತ ಕೊಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ರೈತರು ಬಿತ್ತನೆ ಏನೋ ಮಾಡುತ್ತಿದ್ದಾರೆ. ಆದರೆ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಿಸುತ್ತಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಲ್ಲಿ ಈ ಬಾರಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಬಳ್ಳಾರಿಯಲ್ಲಿ ವಾಡಿಕೆಯಷ್ಟೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತದೆ.
ಕಳೆದ ಬಾರಿ ವಾಡಿಕೆಯಂತೆ ತುಸು ಹೆಚ್ಚು ಮಳೆಯಾದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಹಾಗೂ ಹೋಬಳಿಗಳಲ್ಲಿ ಸರಾಸರಿ ಶೇ.20ರಿಂದ ಶೇ. 59 ಮಳೆ ಕೊರತೆಯಾಗಿತ್ತು. ಕಳೆದ ಬಾರಿ ವಾಡಿಕೆಯಂತೆ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿತ್ತು. ಆರಂಭದಲ್ಲಿ ಮಾರುತಗಳು ದುರ್ಬಲಗೊಂಡ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ಮಳೆ ಕೊರತೆಯಾಗಿತ್ತು. ಜೂನ್‌ನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಗದಗ ಹಾಗೂ ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಸರಾಸರಿ ಶೇ.25ರಿಂದ ಶೇ.40 ಮಳೆ ಕೊರತೆಯಾದರೆ, 43 ತಾಲೂಕು ಹಾಗೂ 187 ಹೋಬಳಿಗಳಲ್ಲಿ ಮಳೆ ಅಭಾವ ಉಂಟಾಗಿತ್ತು.
ಜುಲೈನಲ್ಲಿ ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಸೇರಿ 6 ಜಿಲ್ಲೆಗಳಲ್ಲಿ ಶೇ.24ರಿಂದ ಶೇ 46 ಮಳೆ ಕೊರತೆಯಾದರೆ, 41 ತಾಲೂಕು ಹಾಗೂ 139 ಹೋಬಳಿಗಳಲ್ಲಿ ವಾಡಿಕೆಕ್ಕಿಂತ ಕಡಿಮೆ ಮಳೆಯಾಗಿತ್ತು. ಆಗಸ್ಟ್ ನಲ್ಲಿ ಮಂಡ್ಯ, ರಾಮನಗರ ಹಾಗೂ ಬೆಂಗಳೂರಿನಲ್ಲಿ ಸರಾಸರಿ ಶೇ.40 ಮಳೆ ಕೊರತೆಯಾದರೆ, 48 ತಾಲೂಕು ಹಾಗೂ 212 ಹೋಬಳಿಗಳಲ್ಲಿ ವಾಡಿಕೆಕ್ಕಿಂತ ಕಡಿಮೆ ಮಳೆಯಾಗಿತ್ತು.
ಕಳೆದ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಜೂನ್ 1ರಿಂದ ಸೆಪ್ಟೆಂಬರ್ 30 ರವರೆಗೆ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕಿತ್ತು. 991 ಮಿಮೀ ಮಳೆಯಾಗಿದ್ದು, ಶೇ.16 ಹೆಚ್ಚು ಮಳೆಯಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಶೇ.39, ಉತ್ತರ ಒಳನಾಡಿನಲ್ಲಿ ಶೇ.36, ಕರಾವಳಿಯಲ್ಲಿ ಶೇ.12 ವಾಡಿಕೆಗಿಂತ ಹೆಚ್ಚು ಮಳೆಯಾದರೆ ಮಲೆನಾಡಿನಲ್ಲಿ ಶೇ.5 ಕಡಿಮೆ ಮಳೆ ಬಿದ್ದಿತ್ತು.
ರಾಜ್ಯದಲ್ಲಿ ಘೋಷಿಸಿರುವ ಕೊರೊನಾ ಕರ್ಪ್ಯೂ ಸಂದರ್ಭದಲ್ಲಿ ರೈತರಿಗಾಗಲಿ ಕೃಷಿ ಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆ ಆಗಬಾರದೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಮ್ ಆರಂಭಿಸಿದೆ. ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಅಗ್ರಿವಾರ್ ರೂಮ್ ಆರಂಭಿಸಿರುವಂತೆಯೇ ಈ ಬಾರಿಯೂ ರೈತರಿಗೆ ಕೃಷಿ ಇಲಾಖೆಯಲ್ಲಿ "ಅಗ್ರಿ ವಾರ್ ರೂಮ್" ಆರಂಭಿಸಲಾಗಿದೆ.
ಈಗಾಗಲೇ ಮುಂಗಾರು ಆರಂಭವಾಗುತ್ತಿರುವುದರಿಂದ ಕೊರೊನಾ ಕರ್ಪ್ಯೂ ಅವಧಿಯಲ್ಲಿ ಯಾವುದೇ ಇಲಾಖೆಯಾಗಲೀ ಅಧಿಕಾರಿಗಳಾಗಲೀ ಕೃಷಿ ಪರಿಕರ ಸಾಗಾಣಿಕೆ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಕೃಷಿ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
2020ನೇ ಸಾಲಿನಲ್ಲಿ ಕೋವಿಡ್ ನಿರ್ಬಂಧಿತ ಅವಧಿಯಲ್ಲಿಯೂ ಶೇ.106ಕ್ಕೂ ಹೆಚ್ಚಿನ ದಾಖಲೆಯ ಬಿತ್ತನೆಯಾಗಲು ನೆರವಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ಈ ಸಹಾಯವಾಣಿ ಅಗ್ರಿವಾರ್ ರೂಮ್ ಕಾರ್ಯನಿರ್ವಹಿಸಲಿದೆ.