ಹೈದರಾಬಾದ್: ಆಂಧ್ರಪ್ರದೇಶದಿಂದ ಕೊರೊನಾ ರೋಗಿಗಳನ್ನು ಹೊತ್ತು ತಂದ ಆಂಬ್ಯುಲೆನ್ಸ್ಗೆ ತೆಲಂಗಾಣ ಗಡಿಯಲ್ಲಿ ಪೊಲೀಸರು ಪ್ರವೇಶ ನಿರಾಕರಿಸಿದ್ದಾರೆ.
ಕೊರೊನಾ ಚಿಕಿತ್ಸೆಗಾಗಿ ಆಂಧ್ರಪ್ರದೇಶದಿಂದ ತೆಲಂಗಾಣಕ್ಕೆ ಬರುವ ಎಲ್ಲಾ ಆಂಬ್ಯುಲೆನ್ಸ್ಗಳು ಮತ್ತು ಖಾಸಗಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸೂರ್ಯಪೇಟೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆರ್. ಭಾಸ್ಕರನ್ ತಿಳಿಸಿದ್ದಾರೆ.
ಚಿಕಿತ್ಸೆಗೆ ಬರುವವರಿಗೆ ಆಸ್ಪತ್ರೆಯ ವತಿಯಿಂದ ಹಾಗೂ ಕೋವಿಡ್ ನಿಯಂತ್ರಣ ಕೇಂದ್ರದ ನಿರ್ದೇಶಕರಿಂದ ಪಡೆದ ಅಧಿಕೃತ ಪಾಸ್ ಇದ್ದರೆ ಮಾತ್ರ ತೆಲಂಗಾಣಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಹೀಗಾಗಿ ಇಲ್ಲಿಗೆ ಬರುವವರು ಎರಡೂ ದಾಖಲೆಗಳನ್ನು ಹೊಂದಿರಬೇಕು. ನಂತರ ಅವರು ತೆಲಂಗಾಣಕ್ಕೆ ಬರಬೇಕು ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶದ ಅನೇಕ ಆಂಬ್ಯುಲೆನ್ಸ್ಗಳನ್ನು ಗರಿಕಾಪಾಡು ಮತ್ತು ರಾಮಪುರಂ ಚೆಕ್‌ಪಾಯಿಂಟ್‌ನಲ್ಲಿ ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಇದೇ ವೇಳೆ ಮಹಿಳೆಯೋರ್ವರು ತಮ್ಮ ನೋವು ತೋಡಿಕೊಂಡಿದ್ದು, ಮುಂಜಾನೆ 4ರಿಂದ ಆಂಧ್ರಪ್ರದೇಶ-ತೆಲಂಗಾಣ ಗಡಿಯ ಗಡ್ವಾಲ್‌ನ ಪುಲ್ಲೂರ್ ಟೋಲ್ ಗೇಟ್‌ನಲ್ಲಿ ಸಿಲುಕಿಕೊಂದ್ದೇವೆ. ಬೆಳಿಗ್ಗೆ 4 ಗಂಟೆಯಿಂದ ನಮ್ಮನ್ನು ಇಲ್ಲಿ ನಿಲ್ಲಿಸಿದ್ದಾರೆ. ಆಮ್ಲಜನಕ ಮುಗಿಯುತ್ತಿದ್ದಂತೆ ವರದಿಗಾರರು ನನಗೆ ಸಹಾಯ ಮಾಡಿದರು. ನಾನು ಮತ್ತೆ ಕರ್ನೂಲ್ ಪ್ರದೇಶಕ್ಕೆ ಹೋಗಿ ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕವನ್ನು ತುಂಬಿಸಿ ಹಿಂತಿರುಗಿ ಬಂದೆ. ಈ ಆಮ್ಲಜನಕ ಕೂಡ ಎರಡು ಗಂಟೆಗಳ ಕಾಲ ಮಾತ್ರ ಇರುತ್ತದೆ ಎಂದು ಹೇಳಿದ್ದಾಳೆ.
ಆಂಧ್ರಪ್ರದೇಶ ಅಥವಾ ತೆಲಂಗಾಣ ಸರ್ಕಾರದಿಂದ ಯಾರೂ ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ಇದರ ನಡುವೆ ತೆಲಂಗಾಣ ಸರ್ಕಾರವು ವಿವಿಧ ರಾಜ್ಯಗಳಿಂದ ಬರುವ ಕೋವಿಡ್ ಸೋಂಕಿತರಿಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ರೋಗಿಯ ಹೆಸರಿನಲ್ಲಿ ಆಸ್ಪತ್ರೆಯ ಹಾಸಿಗೆಯನ್ನು ಕಾಯ್ದಿರಿಸುವುದು ಕಡ್ಡಾಯವಾಗಿದೆ ಮತ್ತು ಅವರಿಗೆ ಆಸ್ಪತ್ರೆಗೆ ಬರಲು ಅನುಮತಿ ಪತ್ರ ಇದ್ದರೆ ಮಾತ್ರ ಅವರನ್ನು ತೆಲಂಗಾಣಕ್ಕೆ ಅನುಮತಿಸಲಾಗುತ್ತದೆ.
ರಾಜ್ಯ ಸರ್ಕಾರದ ಪ್ರಕಾರ, ಚಿಕಿತ್ಸೆಗಾಗಿ ತೆಲಂಗಾಣಕ್ಕೆ ಪ್ರವೇಶಿಸುವ ವಿವಿಧ ಜನರಿಂದ ಕೋವಿಡ್ ಪ್ರಕರಣಗಳ ಉಲ್ಬಣ ಆಗುತ್ತಿದೆಯಂತೆ. ಹೀಗಾಗಿ ರಾಜ್ಯ ಸರ್ಕಾರವು ಇತರ ರಾಜ್ಯಗಳಿಂದ ಬರುವ ಜನರಿಗೆ ವಿಶೇಷ ಕಾಲ್ ಸೆಂಟರ್ ಸ್ಥಾಪಿಸಿದೆ.
ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಜನರು ಸಮಾಲೋಚನೆ ಪಡೆಯಬಹುದು: 040-24651119, +91 94944 38351.