ಕೊಳ್ಳೇಗಾಲ: ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಜನರಲ್ಲಿ ಭಯದ ಮನಸ್ಥಿತಿ ಉಂಟಾಗಿದ್ದು, ಅದನ್ನು ಬದಲಿಸುವತ್ತ ಟಾಸ್ಕ್ ಫೋರ್ಸ್ ಸಮಿತಿ ಕಾರ್ಯನಿರ್ವಸಬೇಕಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ನಗರದ ತಾ.ಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಾಸ್ಕ್ಫೋರ್ಸ್ ಸೋಂಕಿತರಿಗೆ ತೊಂದರೆಯಾಗದ ರೀತಿ ಚಿಕಿತ್ಸೆ ನೀಡುವ ಬಗ್ಗೆ, ಆಮ್ಲಜನಕ ಸೂಕ್ತ ಪ್ರಮಾಣದಲ್ಲಿ ಲಭ್ಯತೆ, ಹಾಸಿಗೆ, ಹೋಂ ಐಸೋಲೇಷನ್ ನಲ್ಲಿರುವವರ ಆರೋಗ್ಯ ವಿಚಾರಣೆ, ಇನ್ನಿತರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಜನರಿಗೆ ಟಾಸ್ಕ್ ಪೋರ್ಸ್ ಮೇಲೆ ನಂಬಿಕೆ ಬರಬೇಕು. ಒಳ್ಳೇಯ ಭಾವನೆ ಮೂಡಬೇಕು. ಆಸ್ಪತ್ರೆಗೆ ಹೋದ ರೋಗಿಗಳು ನಗುಮುಖದಿಂದ ಹೊರಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ನಾವು ಸುರಕ್ಷಿತ ವಾಗಿದ್ದುಕೊಂಡು ನಮ್ಮವರನ್ನೂ ಸುರಕ್ಷಿತವಾಗಿಡಲು ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು.
ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ನಲ್ಲಿ ಎರಡು ದಿನಕ್ಕೊಮ್ಮೆ ಸಭೆ ಸೇರಿ ಕೊರೊನಾ ನಿಯಂತ್ರಣಕ್ಕಾಗಿ ಪರಿಸ್ಥಿತಿ ಅವಲೋಕನ ಮಾಡಬೇಕು. ಎಲ್ಲಿ ಲೋಪವಿದೆ ಅದನ್ನ ಸರಿಪಡಿಸುವ ಕುರಿತು ಹಾಗೂ ನ್ಯೂನತೆ ಬಗೆಹರಿಸಲು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ಗೆ ತಿಳಿಸಬೇಕು. ಇದ ಮುಖ್ಯ ಜವಾಬ್ದಾರಿ ಶಾಸಕ ಮಹೇಶ್ ಅವರದ್ದಾಗಿದ್ದು, ಅವರೇ ಅಧ್ಯಕ್ಷರಾಗಿರಲಿದ್ದಾರೆ ಎಂದರು.
ಸಮಿತಿಯಲ್ಲಿ ತಹಶೀಲ್ದಾರ್ ಕುನಾಲ್, ಡಿವೈಎಸ್ಪಿ ನಾಗರಾಜು, ಸಿಪಿಐ ಶಿವರಾಜ್ ಮುದೋಳ್, ಡಾ. ಗೋಪಾಲ್, ಗಂಗಾಧರ್, ಮುಖ್ಯ
ವೈದ್ಯ ಡಾ. ರಾಜಶೇಖರ್, ಮಂಜುಳಾ ಇನ್ನಿತರ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.
8 ಸಾವು- ದುರಂತಕ್ಕೆ ಸಚಿವರ ವಿಷಾದ: ಕೊರೊನಾದಿಂದಾಗಿ ಇಂದು 6 ಹಾಗೂ ಕೋವಿಡ್ ಲಕ್ಷಣ ಹೊಂದಿದ್ದ 2 ಜನ ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕಾಗಿ ನಾನು ವಿಷಾದಿಸುವೆ. ಇದು ನಿಜಕ್ಕೂ ವಿಷಾದನೀಯ ಎಂದರು.
ಅನಗತ್ಯ ಸಂಚಾರ ವಾಹನಗಳ ಜಪ್ತಿಮಾಡಿ: ಪೊಲೀಸರು ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಬೇಕು. ಕೊರೊನಾ ಮುಗಿಯುವವರೆಗೂ ವಾಹನ ನೀಡಬಾರದು. ಇದರಿಂದ ಕೊರೊನಾ ನಿಯಂತ್ರಣ ಸಾಧ್ಯ ಎಂದು ಸಚಿವರು ತಿಳಿಸಿದರು.