ವಿಜಯಪುರ: ವಿಜಯಪುರ ಜಿಲ್ಲೆಯ ಶಿಕ್ಷಕರ ಮನೆಗಳನ್ನು ಟಾರ್ಗೆಟ್ ಮಾಡಿ ಸರಣಿ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಜೆ ಹಿನ್ನೆಲೆಯಲ್ಲಿ ಮನೆಗಳಿಗೆ ಬೀಗ ಹಾಕಿಕೊಂಡು ಊರಿಗೆ ಹೋದ ಶಿಕ್ಷಕರ ಮನೆಗಳನ್ನು ಗುರಿ ಮಾಡಿಕೊಂಡು ಕಳ್ಳತನ ಮಾಡಲಾಗುತ್ತಿದೆ. ಹೀಗೆ ವಿಜಯಪುರ ತಾಲೂಕಿನ ಕನ್ನೂರಿನಲ್ಲಿ 7 ಶಿಕ್ಷಕರ ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.
ಕೆಲವರು ರಜೆಗೆಂದು ಊರಿಗೆ ಹೋದಾಗ, ಇನ್ನೂ ಕೆಲವೆಡೆ ಮನೆಮಂದಿ ರಾತ್ರಿ ವೇಳೆ ಮನೆ ಮಾಳಿಗೆ ಮೇಲೆ ಮಲಗಿದ್ದಾಗ ಹೊಂಚು ಹಾಕಿದ ಕಳ್ಳರ ಗ್ಯಾಂಗ್ ತಮ್ಮ ಕೈಚಳಕ ತೋರಿಸಿದ್ದಾರೆ.
ಕಳ್ಳರ ಕರಾಮತ್ತು ಇಷ್ಟಕ್ಕೆ ನಿಂತಿಲ್ಲ. ಕನ್ನೂರ ಗ್ರಾಮದ ನಾಡದೇವಿ ದೇವಸ್ಥಾನದಲ್ಲೂ ಕಳ್ಳತನ ನಡೆದಿದೆ. ಒಟ್ಟಾರೆ 7 ಮನೆಗಳು, ದೇವಸ್ಥಾನ ಸೇರಿ ಆರು ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣ ಹಾಗೂ ಎರಡು ಲಕ್ಷ ನಗದು ದೋಚಿದ್ದಾರೆ. ದೇವಿಯ ಮೈಮೇಲಿದ್ದ ಬೆಳ್ಳಿಯ ಕಿರೀಟ, ಖಡ್ಗ ಹಾಗೂ ತ್ರಿಶೂಲ ಸಹ ಕಳ್ಳತನವಾಗಿದೆ.
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.