ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ನಿಯಮ 2016 ಅನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಹಸಿಕಸ ಗೊಬ್ಬರಕ್ಕೆ, ಒಣ ಕಸ ಮಾತ್ರ ಮರುಬಳಕೆಗೆ ಕೊಡಬೇಕು. ಆರು ತಿಂಗಳಲ್ಲಿ ನಿಯಮ ಅನುಸರಿಸಬೇಕು. ನಂತರ ಯಾವುದೇ ಮುಲಾಜಿಲ್ಲದೆ ದಂಡ ಹಾಕಿ ಎಂದು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ರಾಜ್ಯ ಸಮಿತಿ ನಿರ್ದೇಶಕ ಸುಭಾಷ ಬಿ.ಆದಿ ಖಡಕ್ ಎಚ್ಚರಿಕೆ ನೀಡಿದರು.
ಜಿಕೆವಿಕೆ ಆವರಣದಲ್ಲಿ ಮಂಗಳವಾರ ಯಲಹಂಕ ವಲಯದ ಘನತ್ಯಾಜ್ಯ ನಿರ್ವಹಣೆ ಕುರಿತು ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳು, ಪೌರಕಾರ್ಮಿಕರ ಹಾಗೂ ಎನ್ಜಿಒಗಳ ಜತೆ ನಡೆದ ಸಭೆ ಭಾಗವಹಿಸಿ ಅವರು ಮಾತನಾಡಿದರು.
ಕಸ ನಿರ್ವಹಣೆಗೆ ವಾರ್ಷಿಕ 1,500 ಕೋಟಿ ರೂಪಾಯಿಯನ್ನು ಬಿಬಿಎಂಪಿ ಭರಿಸುತ್ತಿದೆ. ಇದನ್ನು ತಗ್ಗಿಸಬೇಕು. ಘನತ್ಯಾಜ್ಯ ನಿರ್ವಹಣೆ ನಿಯಮ-2016ರನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ನಮ್ಮ ದೇಶದಲ್ಲಿ ದಂಡ ವಿಧಿಸದಿದ್ದರೇ ಯಾರೂ ನಿಯಮ ಪಾಲಿಸಲ್ಲ. ಅದು ಸಾರ್ವಜನಿಕರ ಹಣ ಅದನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಸರ್ಕಾರದಿಂದ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೂ ಬೆಂಗಳೂರು ಸ್ವಚ್ಛವಾಗುತ್ತಿಲ್ಲ. ಇಷ್ಟು ವೆಚ್ಚದಲ್ಲಿ ಮಧ್ಯವರ್ತಿಗಳು ಎಷ್ಟು ನುಂಗುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬೆಂಗಳೂರಿನವರಾದ ಅಲ್ಮಿತ್ರ ಪಟೇಲ್ ಅವರು ಕಸ ಸಮಸ್ಯೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮ-2016 ರಚೆನೆ ಮಾಡಲು ಸಹಕರಿಸಿದ್ದಾರೆ. ಈ ನಿಯಮ ಬೆಂಗಳೂರ ನಗರದಲ್ಲಿ ಆರು ತಿಂಗಳೊಳಗೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದೇನೆ ಎಂದರು.
ಬೆಂಗಳೂರಿನ ಇತರೆ ವಲಯಗಳಿಗಿಂತ ಯಲಹಂಕ ವಲಯವೇ ಕಸ ವಿಂಗಡನೆಯಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ಸ್ವಚ್ಛತೆಯಲ್ಲಿ ಇನ್ನೂ ಅಭಿವೃದ್ಧಿಯಾಗಬೇಕಿದೆ. ಅಲ್ಲದೆ ವೆಚ್ಚವನ್ನು ತಗ್ಗಿಸಬೇಕಿದೆ ಎಂದು ವಿಶೇಷ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದರು.
ಫ್ಲೆಕ್ಸ್- ಬ್ಯಾನರ್ ಬ್ಯಾನ್ ಮಾಡಿದ್ದು ಒಳ್ಳೆಯದಾಗಿದೆ. ಆದರೆ, ಕಸ ಸಮಸ್ಯೆ ಬಗೆಹರಿಯುತ್ತಿಲ್ಲ. ದಂಡ ಹಾಕಿ ಬುದ್ದಿ ಕಲಿಸಿ ಎಂದರೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದರು. ಸಭೆಯ ಬಳಿಕವಾದರೂ ಎನ್ಜಿಟಿ ಪ್ರಯತ್ನ ಸಫಲವಾಗಿ, ನಗರ ಸ್ವಚ್ಛವಾಗುತ್ತಾ ಅಥವಾ ಕೋಟ್ಯಾಂತರ ರೂಪಾಯಿ ಖರ್ಚು ಹೀಗೇ ಮುಂದುವರಿಯುತ್ತಾ ಕಾದುನೋಡಬೇಕಿದೆ.
ಯಲಹಂಕ ವಲಯದ ತ್ಯಾಜ್ಯ ನಿರ್ವಹಣೆ ವಿವರಗಳು ಹಾಗೂ ಜನಸಂಖ್ಯೆ
7.25 ಲಕ್ಷ ಮನೆಗಳು,
1.81 ಲಕ್ಷ
ಸ್ಲಂ, 53
ಪಾರ್ಕ್, 250 ಟನ್ (ದಿನಕ್ಕೆ)
ಹಸಿ ತ್ಯಾಜ್ಯ, 155 ಟನ್
ಒಣ ತ್ಯಾಜ್ಯ, 75 ಟನ್
ಇತರೆ
ತಿಂಗಳಿನ ವೆಚ್ಚ 3.76 ಕೋಟಿ
ಪೌರಕಾರ್ಮಿಕರ ಸಂಬಳ (ತಿಂಗಳ ವೆಚ್ಚ) 1.50 ಕೋಟಿ
ಗುತ್ತಿಗೆದಾರರಿಗೆ 1.50 ಕೋಟಿ
ನಾಲ್ಕು ತಿಂಗಳಿನ ದಂಡ 72,600
ದೊಡ್ಡ ಬಿದಿರೆಕಲ್ಲು ಘಟಕಕ್ಕೆ 45 ಟನ್
ಕೃಷಿ ಭೂಮಿಗೆ 10-12 ಟನ್ ಕಸ ವಿಂಗಡನೆ ಮಾಡಲಾಗುತ್ತದೆ.