ನವದೆಹಲಿ: ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಯು ದೇಶದಲ್ಲಿ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಮೇ 28 ರಿಂದ ಪ್ರತಿದಿನ ಎರಡು ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಮೇ 7 ರಂದು ವರದಿಯಾದ ಗರಿಷ್ಠ ಪ್ರಕರಣಗಳಿಗೆ ಹೋಲಿಕೆ ಮಾಡಿದೆ ಸುಮಾರು ಶೇ 68 ರಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯ ಹೇಳಿದೆ.
ಮೇ 7 ರಂದು ಅತಿ ಹೆಚ್ಚು ವರದಿಯಾದ ಗರಿಷ್ಠ ಪ್ರಕರಣಗಳಿಗೆ ಹೋಲಿಸಿದರೆ ದೈನಂದಿನ ಪ್ರಕರಣಗಳಲ್ಲಿ ಶೇಕಡಾ 68 ರಷ್ಟು ಕುಸಿತವಾಗಿದೆ. ಹಾಗೆಯೇ ಶೇಕಡಾ 66 ರಷ್ಟು ಹೊಸ ಪ್ರಕರಣಗಳು ಐದು ರಾಜ್ಯಗಳಿಂದ ದಾಖಲಾಗುತ್ತಿವೆ. ಉಳಿದ ಶೇ 33 ರಷ್ಟು ಪ್ರಕರಣಗಳು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುತ್ತಿವೆ. ನಾವು ಸ್ಥಳೀಯವಾಗಿ ವೈರಸ್ ನಿಯಂತ್ರಿಸಬಹುದೆಂಬುದನ್ನು ಇದು ಸೂಚಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
29 ರಾಜ್ಯಗಳು ಪ್ರತಿದಿನ 5,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇದು ಒಟ್ಟಾರೆ ಸೋಂಕಿನ ಹರಡುವಿಕೆಯ ನಿಯಂತ್ರಣವನ್ನು ಸೂಚಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು 100 ಕ್ಕೂ ಹೆಚ್ಚು ಸರಾಸರಿ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡುತ್ತಿದ್ದ ಜಿಲ್ಲೆಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಇದರಲ್ಲಿ ಈಗ 257 ಜಿಲ್ಲೆಗಳು 100 ಕ್ಕೂ ಹೆಚ್ಚು ದೈನಂದಿನ ಪ್ರಕರಣಗಳನ್ನು ವರದಿ ಮಾಡುತ್ತಿದ್ದರೆ, 377 ಜಿಲ್ಲೆಗಳು ಪ್ರಸ್ತುತ ಶೇಕಡಾ 5 ಕ್ಕಿಂತ ಕಡಿಮೆ ಪಾಸಿಟವ್ ಪ್ರಕರಣಗಳನ್ನು ವರದಿ ಮಾಡುತ್ತಿವೆ ಎಂದು ಅಗರ್ವಾಲ್ ಹೇಳಿದ್ದಾರೆ.
ಚೇತರಿಕೆ ದರದಲ್ಲಿಯೂ ಸ್ಥಿರವಾದ ಏರಿಕೆ ಕಂಡುಬಂದಿದೆ. ಪ್ರಸ್ತುತ ಇದು ಶೇಕಡಾ 93.1 ರಷ್ಟಿದೆ. ಕಳೆದ ತಿಂಗಳಿನಿಂದ ಸಕ್ರಿಯ ಪ್ರಕರಣಗಳಲ್ಲೂ ಇಳಿಕೆ ಕಂಡುಬಂದಿದೆ. ಮೇ 10 ರಂದು 37 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು. ಅದು 16.35 ಲಕ್ಷಕ್ಕೆ ಇಳಿದಿದೆ ಎಂದು ಹೇಳಿದರು.
ಲಸಿಕೆ ಸಂಬಂಧ ಮಾತನಾಡಿದ ಅವರು, ಭಾರತದಲ್ಲಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರ ಸಂಖ್ಯೆ 17.2 ಕೋಟಿ. ಈ ಮೂಲಕ ಜನ ಸಂಖ್ಯಾ ಆಧಾರದ ಮೇಲೆ ಭಾರತ ಯುಎಸ್ ಅನ್ನು ಹಿಂದಿಕ್ಕಿದೆ. ಶೇಕಡಾ 60 ಕ್ಕಿಂತ ಹೆಚ್ಚು ವೃದ್ಧರು ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.