ಚೆನ್ನೈ: ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ತೃತೀಯ ರಂಗವನ್ನು ಮುನ್ನೆಲೆಗೆ ತರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಬಹುದೊಡ್ಡ ಕನಸಿಗೆ ಡಿಎಂಕೆ ಕೈ ಜೋಡಿಸುವ ಸಾಧ್ಯತೆ ಅನುಮಾನ ಎನ್ನುವ ಮಾತು ಪಕ್ಷದ ವಲಯದಿಂದಲೇ ವ್ಯಕ್ತವಾಗಿದೆ.
ಸೋಮವಾರ ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ರನ್ನು ಭೇಟಿಯಾದ ಕೆಸಿಆರ್ ಗಂಟೆಗೂ ಹೆಚ್ಚಿನ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಸಿಆರ್ ರಾಷ್ಟ್ರೀಯ ಪಕ್ಷಗಳ ಹೊರತಾದ ಮೂರನೇ ರಂಗದ ನಿರ್ಮಾಣದ ಬಗ್ಗೆ ತಮ್ಮ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆಗೆ ಇದೇ ವಿಚಾರ ಮಾತುಕತೆಯಲ್ಲಿ ಮುಳ್ಳಾಗಿ ಪರಿಣಮಿಸಿದೆ. ಕಾಂಗ್ರೆಸ್ ಹೊರತಾದ ಸರ್ಕಾರಕ್ಕೆ ಕೆಸಿಆರ್ ಹವಣಿಸುತ್ತಿದ್ದರೆ, ಅತ್ತ ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿಯೇ ಸೂಕ್ತ ಅಭ್ಯರ್ಥಿ ಎಂದು ಡಿಎಂಕೆ ಈಗಾಗಲೇ ಘೋಷಣೆ ಮಾಡಿದೆ.
ಮಾತುಕತೆಯ ವೇಳೆ ಇವೆಲ್ಲವೂ ಪ್ರಸ್ತಾಪವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಗಳಿಲ್ಲದೆ ಕೆಸಿಆರ್ ಹಾಗೂ ಸ್ಟಾಲಿನ್ ಭೇಟಿ ಅಂತ್ಯವಾಗಿದೆ.
ಪ್ರಾದೇಶಿಕ ಪಕ್ಷವೇ ಸರ್ಕಾರ ರಚನೆ ಮಾಡಿ ರಾಷ್ಟ್ರೀಯ ಪಕ್ಷ ಬೆಂಬಲ ನೀಡುವ ಪ್ಲಾನ್ ಸಹ ಕೆಸಿಆರ್ ಮಾತುಕತೆಯಲ್ಲಿ ಮುಂದಿಟ್ಟಿದ್ದಾರೆ. ಇವೆಲ್ಲದಕ್ಕೂ ಫಲಿತಾಂಶ ನಿರ್ಣಾಯಕವಾಗಿದ್ದು, ಸದ್ಯಕ್ಕೆ ಭೇಟಿ ಫಲಪ್ರದವಾಗಿಲ್ಲ ಎಂದು ಡಿಎಂಕೆ ಮೂಲಗಳು ಸ್ಪಷ್ಟಪಡಿಸಿವೆ.