ಬೆಳಗಾವಿ: ರಾಜ್ಯದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಆಗಲಿ ಎಂದು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಂದು ಬೆಳಗ್ಗೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಅಭಿಷೇಕ ಮಾಡಿಸಿ, ಮಳೆಗಾಗಿ ಪ್ರಾರ್ಥಿಸಲಾಯಿತು. ರಾಜ್ಯ ಸರ್ಕಾರ ಮಳೆಗಾಗಿ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಗೆ ಆದೇಶಿಸಲಾಗಿತ್ತು. ಹೀಗಾಗಿ ಉತ್ತರ ಕರ್ನಾಟಕದ ಪ್ರಮುಖ ದೇವಾಲಗಳಲ್ಲಿ ಒಂದಾದ ಸವದತ್ತಿಯ ಯಲ್ಲಮ್ಮ ದೇವಿಗೆ ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಆಡಳಿತಾಧಿಕಾರಿ ರವಿ ಕೊಟಾರಗಸ್ತಿ ಅವರ ಸಮ್ಮುಖದಲ್ಲಿ ಪೂಜೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.