ಗದಗ: ಜಿಲ್ಲೆಯ ಹಾತಲಗೇರಿ ಗ್ರಾಮದ ವೀರಯೋಧ ಶ್ರೀಕಾಂತ ಕರಿ ಎಂಬ ಸೈನಿಕನ ತಾಯ್ನಾಡಿನ ಪ್ರೀತಿ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಜೊತೆಗೆ ಯೋಧನಾದವನ ಮನಸ್ಥಿತಿ ಹೇಗಿರುತ್ತದೆ ಅನ್ನೋದನ್ನು ಪರಿಚಯಿಸುತ್ತದೆ. ಒಮ್ಮೆ ತಾಯ್ನಾಡಿನ ರಕ್ಷಣೆಗೆ ಪಣ ತೊಟ್ಟವರ ರಕ್ತದ ಕಣ ಕಣದಲ್ಲೂ ದೇಶ ಪ್ರೇಮ ಹೇಗೆ ತುಂಬಿರುತ್ತದೆ ಅನ್ನೋದನ್ನು ತೋರಿಸುತ್ತದೆ.
ಹೌದು, ಶ್ರೀಕಾಂತ ಕರಿ ತಮ್ಮ 18ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿದವರು. ಈಗ ಬರೋಬ್ಬರಿ 18 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ದೇಶಪ್ರೇಮ ನಿಜಕ್ಕೂ ಎಂತವರನ್ನು ನಿಬ್ಬೆರಗಾಗಿಸುತ್ತದೆ. ಜಮ್ಮು-ಕಾಶ್ಮೀರದ ಸೋಫಿಯಾನ್ ಪ್ರದೇಶದಲ್ಲಿ ಶ್ರೀಕಾಂತ್ ಕರಿ ಕಾರ್ಯನಿರ್ವಸುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಇವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲೇ ಉಗ್ರರು ಅವಿತಿರುವ ಮಾಹಿತಿ ಬಂದಿತ್ತು. ದೇಶ ರಕ್ಷಣೆಗೆ ಶ್ರೀಕಾಂತ ಕರಿ ಸೇರಿದಂತೆ ತಂಡದ ಇತರ ಸದಸ್ಯರು ಕಾರ್ಯಪ್ರವೃತ್ತರಾಗಿ ಉಗ್ರರ ಮೇಲೆ ಮುಗಿಬಿದ್ದಿದ್ದರು. ಈ ವೇಳೆ ಶ್ರೀಕಾಂತ ಕರಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು.
ಆದ್ರೆ ಈ ಸೆಣಸಾಟದಲ್ಲಿ ಸ್ವತಃ ಶ್ರೀಕಾಂತರಿಗೂ ಮೂರು ಗುಂಡು ತಗುಲಿದ್ದವು. ಉಗ್ರರ ದಮನವಾದ ನಂತರವೇ ಈ ಕೆಚ್ಚೆದೆಯ ವೀರ ಯೋಧನಿಗೆ ತನ್ನದೇ ದೇಹವನ್ನು ಸಿಳಿಕೊಂಡು ಮೂರು ಗುಂಡು ಹೊಕ್ಕಿರೋದು ಗೊತ್ತಾಗಿದೆ. ತಾನು ಸಾಯೋದಿಲ್ಲ. ಮೊದಲು ಕೆಲಸ ಮುಗಿಸೋಣವೆಂದು ಸಹೋದ್ಯೋಗಿಗಳಿಗೆ ಹೇಳಿದ್ದರಂತೆ. ಅವತ್ತು ಕಣ್ಣು ಮುಚ್ಚಿದ್ದ ಶ್ರೀಕಾಂತ ಬರೋಬ್ಬರಿ 17 ದಿನ ಕೋಮಾದಲ್ಲಿದ್ದರು.
ಅಕ್ಷರಶಃ ಸಾವು ಬದುಕಿನ ನಡುವಿನ ಹೋರಾಟವದು. ಶ್ರೀಕಾಂತ ಗುಂಡು ತಗುಲಿರುವ ಕುರಿತು ಮನೆಯವರಿಗೆ ತಿಳಿಸದಂತೆ ಸಹೋದ್ಯೋಗಿಗಳಿಗೆ ಹೇಳಿದ್ದರಂತೆ. ಹೀಗಾಗಿ ಈ ವಿಷಯ ಶ್ರೀಕಾಂತ ಕುಟುಂಬಸ್ಥರಿಗೆ ತಿಳಿದೇ ಇರಲಿಲ್ಲ. ಇನ್ನು 17 ದಿನಗಳ ಬಳಿಕ ಕೋಮಾದಿಂದ ಮರಳಿದ ಶ್ರೀಕಾಂತರನ್ನು ಸೈನ್ಯ ಎರಡು ತಿಂಗಳು ರಜೆ ಮಂಜೂರು ಮಾಡಿ ಸ್ವಗ್ರಾಮಕ್ಕೆ ಮರಳುವಂತೆ ಸೂಚಿಸಿತ್ತು. ಮೂರು ಗುಂಡು ತಿಂದು ಜರ್ಜರಿತವಾಗಿದ್ದ ದೇಹವದು. ರಜೆಯ ಮೇಲೆ ಮರಳಿದ್ದ ಶ್ರೀಕಾಂತ ಗ್ರಾಮಕ್ಕೆ ಬಂದ ನಂತರವೇ ವಿಷಯ ಮನೆಯವರಿಗೆ ತಿಳಿಸಿದ್ದರಂತೆ.
ಇದರಿಂದ ಗಾಬರಿಗೆ ಬಿದ್ದ ಶ್ರೀಕಾಂತ ತಾಯಿ ಮತ್ತು ಪತ್ನಿ ಏನಾದ್ರಾಗಲಿ ಬದುಕಿ ಬಂದ ಮಗನಿಗೆ ಮತ್ತೆ ಮರಳೋಕೆ ಬಿಡೋದಿಲ್ಲವೆಂದು ನಿಶ್ಚಯಿಸಿದ್ದರಂತೆ. ಆದ್ರೆ ಅದು ಯೋಧನ ರಕ್ತ ಮೋಹಕ್ಕೆ ಬಲಿಯಾದಿತಾ? ಮೊನ್ನೆ ನಡೆದ ಪುಲ್ವಾಮಾ ದಾಳಿಯ ಸುದ್ದಿ ಯೋಧ ಶ್ರೀಕಾಂತ ಕಿವಿಗೆ ಬಿದ್ದಿದೆ. ರಜೆ ಕೂಡ ಮುಗಿದಿದ್ವು. ಆದ್ರೆ ಮನೆಯಲ್ಲಿ ಮತ್ತೆ ಸೇನೆಗೆ ಹೋಗಲು ಅಡ್ಡಿ ಮಾಡಿದ್ರು. ಆದ್ರೆ ಪತ್ನಿ ಸುಮಾ, ತಾಯಿ ಶಂಕ್ರಮ್ಮಗೆ ದೇಶಸೇವೆಯ ಅಗತ್ಯತೆಯ ಮನವರಿಕೆ ಮಾಡಿ ಮತ್ತೆ ಶತ್ರುಗಳ ವಿರುದ್ಧ ಹೋರಾಟಕ್ಕೆ ಹೋಗಿದ್ದಾರೆ. ಶ್ರೀಕಾಂತ್ನ ದೇಶಪ್ರೇಮಕ್ಕೆ ತಾಯಿ, ಪತ್ನಿ ಮನಸೋತು ಭಾರತಾಂಬೆಯ ಸೇವೆಗೆ ಕಳುಹಿಸಿಕೊಟ್ಟಿದ್ದಾರೆ.
ಈಗ ಶ್ರೀಕಾಂತ್ ಹೋಗಿ ಒಂದು ವಾರವಾಗಿದೆ. ಹೆತ್ತ ತಾಯಿಯ ಕಣ್ಣೀರಿಗೂ ಕರಗದೆ ತಾಯ್ನಾಡ ರಕ್ಷಣೆಗೆ ಧಾವಿಸಿದ್ದಾರೆ. ಕೊನೆ ಉಸಿರು ಇರೋ ತನಕ ತಾನು ದೇಶವನ್ನು ರಕ್ಷಣೆ ಮಾಡ್ತೀನಿ ಅಂತ ನಿಶ್ಚಯಿಸಿದರು. ಈ ಅವಕಾಶ ಎಲ್ಲರಿಗೂ ಬರೋದಿಲ್ಲವೆಂದು ಕುಟುಂಬಕ್ಕೆ ಸಾಂತ್ವನ ಹೇಳಿ ಹೊರಟು ಹೋಗಿದ್ದಾರೆ. ಉಗ್ರರ ದಮನದ ಕಾರ್ಯಾಚರಣೆಯಲ್ಲಿ ಅತ್ಯಂತ ಕಾರ್ಯಕ್ಷಮತೆಯಿಂದ ಹೋರಾಡಿದ ಇವರಿಗೆ ಸೇನೆ ಸೇನಾ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ವೀರ ಮತ್ತು ಕೆಚ್ಚೆದೆಯ ಯೋಧರು ದೇಶದ ಗಡಿಯಲ್ಲಿ ರೋದ್ರಿಂದಲೇ ಇವತ್ತು ನಾವು ಇಲ್ಲಿ ನೆಮ್ಮದಿಯಾಗಿದ್ದೇವೆ.