ಲೋಕಸಮರದಲ್ಲಿ ಭರ್ಜರಿ ಗೆಲುವಿನ ಬಳಿಕ ನರೇಂದ್ರ ದಾಮೋದರ ದಾಸ್ ಮೋದಿ ನಿನ್ನೆ ಈಶ್ವರನ ಹೆಸರಲ್ಲಿ ಭವ್ಯ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ 25 ಕ್ಯಾಬಿನೆಟ್, 9 ಸ್ವತಂತ್ರ ರಾಜ್ಯ ಖಾತೆ ಹಾಗೂ 24 ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು 58 ಮಂತ್ರಿಗಳ ಪೈಕಿ 6 ಮಹಿಳೆಯರು ಮೋದಿ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2014 ರ ಮೋದಿ ಸಚಿವ ಸಂಪುಟದಲ್ಲಿ ಸಪ್ತಸಚಿವೆಯರು ಕಾರ್ಯನಿರ್ವಹಿದ್ದಾರೆ.
ಲೋಕಸಭೆಯ ಇತಿಹಾಸದಲ್ಲಿ ಅತಿ ಹೆಚ್ಚು ಸಂಸದೆಯರನ್ನು ಹೊಂದಿದ ಬೆನ್ನಲ್ಲೇ ಮೋದಿ 6 ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್, ಮನೇಕಾ ಗಾಂಧಿಯನ್ನು ಸಚಿವ ಸಂಪುಟದಿಂದ ಹೊರಗಿಡಲಾಗಿದೆ.
ಮೋದಿ ಟೀಂನ ಸಚಿವೆಯರು :
![nirmala](https://etvbharatimages.akamaized.net/etvbharat/prod-images/3430667_cabinate5.jpg)
1.ನಿರ್ಮಲಾ ಸೀತಾರಾಮನ್ (60) : ಅರ್ಥಶಾಸ್ತ್ರದಲ್ಲಿ ಸ್ನಾಕೋತ್ತರ ಪದವಿ ಪಡೆದ ನಿರ್ಮಲಾ ಸೀತಾರಾಮನ್ ಮುಲತಃ ತಮಿಳುನಾಡಿನ ಚೆನ್ನೈಯವರು. 2008 ರಲ್ಲಿ ಕಮಲಪಾಳಯಕ್ಕೆ ಕಾಲಿಟ್ಟರು. 2014 ರಲ್ಲಿ ಪ್ರಥಮ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ನಂತರ 2017 ರಲ್ಲಿ ಕರ್ನಾಟಕ ರಾಜ್ಯಸಭೆಯಿಂದ ಆಯ್ಕೆಗೊಂಡು ದೇಶದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಮೂಲಕ ಇಂದಿರಾ ಗಾಂಧಿ ಬಳಿಕ ರಕ್ಷಣಾ ಖಾತೆಯ ಹೊಣೆಹೊತ್ತ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ಮತ್ತೊಮ್ಮೆ ಮೋದಿ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
![smruti irani](https://etvbharatimages.akamaized.net/etvbharat/prod-images/3430667_cabinate.jpg)
2. ಸ್ಮೃತಿ ಇರಾನಿ (43) : ಮೂಲತಃ ಉತ್ತರ ಪ್ರದೇಶದ ಅಮೇಥಿಯವರಾದ ಸ್ಮೃತಿ ಇರಾನಿ, ಮಾಡೆಲಿಂಗ್ ಮತ್ತು ಟಿ.ವಿ ಸೀರಿಯಲ್ಗಳ ಮೂಲಕ ಜನರಿಗೆ ಚಿರಪರಿಚಿತರಾದವರು. 2011 ರಲ್ಲಿ ಗುಜರಾತ್ನಿಂದ ರಾಜ್ಯಸಭೆಗೆ ಆಯ್ಕೆಯಾದರು. 2014ರ ಲೋಕಸಮರದಲ್ಲಿ ಅಮೇಥಿಯಿಂದ ಕಣಕ್ಕಿಳಿದು, ರಾಹುಲ್ ಗಾಂಧಿ ವಿರುದ್ಧ ಸೋಲನುಭವಿಸಿದರೂ ಕೂಡಾ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಬಳಿಕ 2017ರಲ್ಲಿ ಸಂಪುಟ ಪುನಾರಚನೆ ವೇಳೆ, ಕೆಲ ವಿವಾದಗಳಿಂದಾಗಿ ಜವಳಿ ಖಾತೆಗೆ ನೀಡಲಾಯಿತು. ಈ ಬಾರಿ ಮತ್ತೆ ಅಮೇಥಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ನಿನ್ನೆ ಮೋದಿ ಟೀಂನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
![sadhvi niranjana devi](https://etvbharatimages.akamaized.net/etvbharat/prod-images/3430667_cabinate.bmp)
3.ಸಾಧ್ವಿ ನಿರಂಜನ ಜ್ಯೋತಿ (52) : ಉತ್ತರ ಪ್ರದೇಶದ ಪತೇಪುರ ಲೋಕಸಭೆಯಿಂದ ಅಖಾಡಕ್ಕಿಳಿದು, ಬಿಎಸ್ಪಿ ಅಭ್ಯರ್ಥಿ ಸುಖದೇವ್ ವರ್ಮಾ ವಿರುದ್ಧ ಜಯಭೇರಿ ಬಾರಿಸಿ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
4. ಹರ್‌ಸಿಮ್ರತ್ ಕೌರ್ ಬಾದಲ್ (53) : ಪದವೀಧರೆಯಾದ ಹರ್‌ಸಿಮ್ರತ್ ಕೌರ್ ಬಾದಲ್ ಮೂಲತಃ ಪಂಜಾಬ್ನ ಬಟಿಂಡದವರು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ದ ಅಧ್ಯಕ್ಷರಾಗಿರುವ ಸುಖ್ಬಿರ್ ಸಿಂಗ್ ಬಾದಲ್ ಅವರ ಪತ್ನಿ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಇವರು 2 ನೇ ಬಾರಿ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಆಹಾರ ಸಂಸ್ಕರಣೆ ಖಾತೆ ನಿಭಾಯಿಸಿದ್ದರು. ಎಸ್‌ಎಡಿ ಪ್ರಭಾವಿ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ 3 ನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದು, ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ತಂದೆ ಪ್ರಕಾಶ್ ಸಿಂಗ್ ಬಾದಲ್ 4 ಬಾರಿ ಪಂಜಾಬ್ನ ಸಿಎಂ ಆಗಿದ್ದರು.
![renuka singh](https://etvbharatimages.akamaized.net/etvbharat/prod-images/3430667_cabinate4.jpg)
5. ರೇಣುಕಾ ಸಿಂಗ್ ಸರೂಟ (58) : ಛತ್ತೀಸ್ಗಢದ ಸರ್ಬುಜಾ ಲೋಕಸಭಾ ಕ್ಷೇತ್ರದಿಂದ ಸಂಸತ್ ಗೆ ಪ್ರವೇಶಿಸಿರುವ ರೇಣುಕಾ ಸಿಂಗ್ ಸರೂಟ, ಇಂದು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
6. ದೇಬೊಶ್ರೀ ಚೌಧರಿ : ಸ್ನಾತಕೋತ್ತರ ಪದವೀಧರೆಯಾಗಿರುವ ದೇಬೊಶ್ರೀ ಚೌಧರಿ ಮೂಲತಃ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ್ ಜಿಲ್ಲೆಯ ಬಲೂರ್ಘಾಟ್ನವರು. ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ಇದೇ ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 2014 ರಲ್ಲಿ ಲೋಕಸಭೆ ಮತ್ತು 2016 ರಲ್ಲಿ ವಿಧಾನ ಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಪಶ್ಚಿಮ ಬಂಗಾಳದ ಪುರುಲಿಯಾ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ದೇಬೊಶ್ರೀ ಚೌಧರಿ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.