ಬೆಂಗಳೂರು: ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕೊರೊನಾ ವಾರಿಯರ್ಸ್ ಸನ್ಮಾನಿಸುವ ಹಾಗೂ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು.
ಚಾಮರಾಜಪೇಟೆ ಶಾಸಕರೂ ಆಗಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಜರಿದ್ದರು. ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಇಲ್ಲಿಯವರೆಗೆ 60 ವರ್ಷ ಹಾಗೂ 40 ವರ್ಷ ಮೇಲ್ಪಟ್ಟವರಿಗೆ ಕೊಡ್ತೀನಿ ಅಂದ್ರು. ಎರಡನೇ ಲಸಿಕೆ ಕೊಡಲು ಸಾಧ್ಯವಾಗ್ತಿಲ್ಲ. ಕೋವ್ಯಾಕ್ಸಿನ್ ಒಂದು ತಿಂಗಳಲ್ಲಿ ಹಾಕಬೇಕು. ಆದ್ರೆ ಅದೇ ಸಿಗ್ತಿಲ್ಲ. ಎರಡನೇ ಡೋಸ್ ತಿಂಗಳಲ್ಲಿ ಕೊಡದಿದ್ರೆ ಪ್ರಯೋಜನವಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಚುಚ್ಚುಮದ್ದು ನೀಡುವ ಅಭಿಯಾನಕ್ಕೆ ವ್ಯಾಕ್ಸಿನ್ ಇಲ್ಲದೆಯೇ ಸಿಎಂ ಚಾಲನೆ ನೀಡಿದ್ದಾರೆ. ನನ್ನ ಪ್ರಕಾರ ರಾಜ್ಯಕ್ಕೆ ವ್ಯಾಕ್ಸಿನ್ನೇ ಬಂದಿಲ್ಲ. ಮೂರು ಕೋಟಿ ಆರ್ಡರ್ ನೀಡಿದ್ದೇವೆ ಅಂತಾರೆ, ಸ್ಟಾಕೇ ಬಂದಿಲ್ಲ. ಸುಮ್ಮನೇ ಅನೌನ್ಸ್ ಮಾಡೋದು ಬೇಜವಾಬ್ದಾರಿತನ ಎಂದರು.
ಸಿಎಂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡದಿರೋ ವಿಚಾರ ಕುರಿತು ಮಾತನಾಡಿ, ಕ್ಷೌರಿಕರು, ಆಟೋ ಚಾಲಕರು, ಕ್ಯಾಬ್ ಡ್ರೈವರ್‌ಗಳು, ಕೂಲಿ ಮಾಡೋರು ಏನು ಮಾಡಬೇಕು. ಅವರಿಗೆ ಪ್ಯಾಕೇಜ್ ಕೊಡಬೇಕು. ಸರ್ಕಾರ ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿತನ, ಉದಾಸೀನತೆ ಎದ್ದು ಕಾಣುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರು ಸುಳ್ಳು ಹೇಳ್ತಿದ್ದಾರೆ. ಮೂರನೇ ವಾರದಲ್ಲಿ ಬರಲಿದೆ ಅಂತ ಸಿಎಸ್ ಹೇಳಿದ್ರು. ಮೂರನೇ ವಾರ ಬಂದಿಲ್ಲ. ಲಾಕ್ಡೌನ್ಗೂ ಇದಕ್ಕೂ ಸಂಬಂಧ ಇಲ್ಲ. ವ್ಯಾಕ್ಸಿನ್ ಕೊಡೋದಕ್ಕೂ, ಲಾಕ್ಡೌನ್ಗೂ ಸಂಬಂಧ ಏನು. ಜಮೀರ್ ಅವರ ಸ್ಟಾಫ್, ಬೇರೆ ಕಡೆ ಕೆಲಸ ಮಾಡೋರಿಗೆ ರೇಷನ್, ಫುಡ್, ಐದು ಸಾವಿರ ಹಣ ಕೊಡ್ತಿದ್ದಾರೆ. ಚಾಮರಾಜಪೇಟೆ ಕ್ಷೇತ್ರದವರಿಗೆ ನೀಡುತ್ತಿದ್ದಾರೆ. ಎಲ್ಲ ವೈದ್ಯರು, ನರ್ಸ್, ಸೆಲ್ಫ್ ಡಿಫೆನ್ಸ್, ಪೊಲೀಸರಿಗೆ ಕೊಡ್ತಿದ್ದಾರೆ. ಹೆಬ್ಬಾಳದಲ್ಲಿ 30 ಸಾವಿರ ಕುಟುಂಬಗಳಿಗೆ ರೇಷನ್ ಕಿಟ್ ನೀಡಲಾಗ್ತಿದೆ. ಹತ್ತು ಕೆ.ಜಿ ಅಕ್ಕಿ, ಬೇಳೆ, ಎಣ್ಣೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡದರು.
ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆಯಲಿ ಸಂತೋಷ. ಆದ್ರೆ ಅದನ್ನ ಬೇರೆ ಕಡೆಗೆ ಡೈವರ್ಟ್ ಮಾಡೋದು ಬೇಡ. ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಪಿಎ ಸತೀಶ್ ಬೆಡ್ ಬ್ಲಾಕಿಂಗ್ ಮಾಡಲು ಮುಂದಾಗಿದ್ರು. ಅವರಿಗೆ ಬೆಡ್ ಕೊಡದಿರುವುದರಿಂದ ಈ ರೀತಿ ಮಾಡಿದ್ರು. 15 ಜನರ ಪೈಕಿ ಮುಸ್ಲಿಮರ ಹೆಸರನ್ನ ಓದಿದ್ಯಾಕೆ.? ಇದರಲ್ಲಿ ಕೋಮುವಾದಿತನ ಕಂಡು ಬರ್ತಿದೆ. ಅವರಿಗೆ ಕೋಮು ವೈರಸ್ ಹರಡಿದೆ. ಇವರಿಗೆ ಬೇಕಾದವರಿಗೆ ಬೆಡ್ ಕೊಡಿಸಲು ಹೀಗೆ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾತನಾಡದಂತೆ ಸಿಎಂ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಸೂರ್ಯನ ಕಿರಣಗಳು ಜಾಸ್ತಿ ಬೀಳುತ್ತವಾ.? ಎಂದು ಪ್ರಶ್ನಿಸಿದರು. ಪೌರಾಡಳಿತ ಇಲಾಖೆಯಿಂದ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಿರೋ ಕುರಿತು ಮಾತನಾಡಿ, 198 ಕಡೆ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದೆವು. ಬೇರೆ ಕಡೆಯಿಂದ ಬರುವವರಿಗೆ, ಕಡಿಮೆ ದರದಲ್ಲಿ ಊಟ ಕೊಡುವ ಯೋಜನೆ ಇದು. ಈ ಸಮಯದಲ್ಲಿ ಈ ರೀತಿ ಮಾಡೋದು ಸರಿಯಲ್ಲ. ಕಾರ್ಪೊರೇಷನ್ ಅವರಿಗೆ ದುಡ್ಡು ಕೊಡಿ ಅಂತ ಯಾಕೆ ಹೇಳಿದ್ದಾರೆ. ಅದು ದೊಡ್ಡ ಮೊತ್ತದ ಹಣವೇನಲ್ಲ, ಎರಡು ಕೋಟಿ ಮಾತ್ರ ವೆಚ್ಚವಾಗಲಿದೆ. ಬಡವರಿಗೆ ಅಷ್ಟು ಹಣವನ್ನ ಕೊಡಲು ಸಾಧ್ಯವಿಲ್ಲವಾ.? ಬಡವರ ಬಗ್ಗೆ ಕಳಕಳಿ ಇದ್ರೆ ಮಾಡಬೇಕು. ಇಲ್ಲದಿದ್ರೆ ಬಡವರ ವಿರೋಧಿಗಳಾಗಲಿದ್ದಾರೆ ಎಂದರು.