ನವದೆಹಲಿ: ಕೋವಿಡ್ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಾಮೂಹಿಕ ಒಗ್ಗಡೂವಿಕೆ ಮತ್ತು ತ್ವರಿತ ಸೋಂಕು ಹಬ್ಬುವಂತಹ ಘಟನೆಗಳ ಮೇಲೆ ನಿಷೇಧ ಹೇರುವುದನ್ನು ಪರಿಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಲಾಕ್‌ಡೌನ್ ಹೇರುವ ಬಗ್ಗೆ ಯೋಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಸಾಮೂಹಿಕ ಸಭೆ ಮತ್ತು ವೇಗವಾಗಿ ಸೋಂಕು ಹರಡುವಿಕೆ ಕಾರಣ ಆಗುವಂತಹ ಘಟನೆಗಳಿಗೆ ನಿಷೇಧ ಹೇರುವುದನ್ನು ಪರಿಗಣಿಸುವಂತೆ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗಂಭೀರವಾಗಿ ಒತ್ತಾಯಿಸುತ್ತೇವೆ. ಜನರ ಹಿತದೃಷ್ಟಿಯಿಂದ ಎರಡನೇ ಅಲೆಯ ವೈರಸ್ ನಿಗ್ರಹಿಸಲು ಲಾಕ್‌ಡೌನ್ ಹೇರುವುದನ್ನು ಸರ್ಕಾರಗಳು ಪರಿಗಣಿಸಬಹುದು ಎಂದು ಸುಪ್ರೀಂ ಹೇಳಿದೆ.
ಲಾಕ್‌ಡೌನ್‌ನ ಸಾಮಾಜಿಕ-ಆರ್ಥಿಕ ಪ್ರಭಾವದ ಬಗ್ಗೆ ನಮಗೆ ಸ್ಪಷ್ಟವಾಗಿ ತಿಳಿದಿದೆ. ಲಾಕ್‌ಡೌನ್ ಹೇರಲು ಸರ್ಕಾರಗಳು ಯೋಚಿಸುವ ಮುನ್ನ ಸಮಾಜದ ಕೊನೆಯ ಅಂಚಿನಲ್ಲಿರುವ ಸಮುದಾಯಗಳ ಅಗತ್ಯಗಳನ್ನು ಪೂರೈಸಲು ಮುಂಚಿತವಾಗಿ ವ್ಯವಸ್ಥೆಗಳನ್ನು ಮಾಡಬೇಕು ಎಂದು ಕೋರ್ಟ್ ಸಲಹೆ ನೀಡಿದೆ.
1,99,25,604 ಜನರಿಗೆ ಸೋಂಕು ತಗುಲಿದೆ. 34,13,642 ಸಕ್ರಿಯ ಪ್ರಕರಣಗಳಿವೆ. ಒಟ್ಟು 2,18,959 ಜನ ಮಾರಣಾಂತಿಕ ವೈರಸಿಗೆ ಬಲಿಯಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಇದುವರೆಗೆ ಕೈಗೊಂಡಿರುವ ಪ್ರಯತ್ನಗಳನ್ನು ದಾಖಲು ಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಸ್‌ಸಿ ಕೇಳಿದೆ.
ಮುಂದಿನ ದಿನಗಳಲ್ಲಿ ಜಾಗತಿಕ ರೋಗವನ್ನು ಎದುರಿಸಲು ಅವರು ಯೋಜಿಸಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ನ್ಯಾಯಾಲಯ ತಾಕೀತು ಮಾಡಿದೆ.
ಕೋವಿಡ್ -19 ಬಿಕ್ಕಟ್ಟನ್ನು ಪರಿಗಣಿಸಿದ ನ್ಯಾಯಾಲಯ, ಸ್ಥಳೀಯತೆ ಅಥವಾ ಗುರುತಿನ ಪುರಾವೆಗಳ ಕೊರತೆಯಿಂದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವೊಬ್ಬ ರೋಗಿಯನ್ನು ಆಸ್ಪತ್ರೆ ಸೇರ್ಪಡೆ ಅಥವಾ ಅಗತ್ಯ ಔಷಧಿಗಳನ್ನು ನಿರಾಕರಿಸಬಾರದು ಎಂದು ನಿರ್ದೇಶಿಸಿದೆ.
ಎರಡು ವಾರಗಳಲ್ಲಿ ಆಸ್ಪತ್ರೆಗಳಿಗೆ ದಾಖಲಾತಿ ಕುರಿತು ಸರ್ಕಾರ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸೂಚಿಸಿದ್ದಾರೆ.
ಈ ನೀತಿಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಅನುಸರಿಸಬೇಕು. ಅಲ್ಲಿಯವರೆಗೆ ಯಾವುದೇ ರೋಗಿಗಳಿಗೆ ಸ್ಥಳೀಯ ವಸತಿ ಅಥವಾ ಗುರುತಿನ ಪುರಾವೆಗಳ ಕೊರೆತಯ ನೆಪ ಹೇಳಿ ಪ್ರವೇಶ ಅಥವಾ ಅಗತ್ಯ ಔಷಧಿಗಳನ್ನು ನಿರಾಕರಿಸುವಂತಿಲಗಲ ಎಂದು ನ್ಯಾಯಾಧೀಶರು ಹೇಳಿದರು.