ಸೇಂಟ್ ಮಾರ್ಟನ್: ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
44 ವರ್ಷದ ಚಂದ್ರಪಾಲ್ ಅವರು ಆ್ಯಡಂ ಸ್ಯಾನ್ಫೋರ್ಡ್ ಕ್ರಿಕೆಟ್ ಫಾರ್ ಲೈಫ್ ಟಿ-20 ಟೂರ್ನಿಯಲ್ಲಿ ಕೇವಲ 76 ಎಸೆತಗಳಲ್ಲಿ ದ್ವಿಶತಕ ಸಿಡಿಸುವುದರ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಮೆರಿಕಾ ಮೂಲದ ಮ್ಯಾಡ್ ಡಾಗ್ಸ್ ತಂಡದ ವಿರುದ್ಧ ವೆಸ್ಟ್ ಇಂಡೀಸ್ನ ಮತ್ತೊಬ್ಬ ದಿಗ್ಗಜ ಡ್ವೇನ್ ಸ್ಮಿತ್ರೊಡನೆ ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದ ಚಂದ್ರಪಾಲ್ ಕೇವಲ 76 ಎಸೆತಗಳಲ್ಲಿ 25 ಬೌಂಡರಿ, 13 ಸಿಕ್ಸರ್ಗಳಿಂದ 210 ರನ್ ಬಾರಿಸಿದ್ದಾರೆ. ಸ್ಮಿತ್ 29 ಎಸೆತಗಳಲ್ಲಿ 54 ರನ್ ಬಾರಿಸಿ ತಂಡದ ಮೊತ್ತವನ್ನು 303ಕ್ಕೆ ಕೊಂಡೊಯ್ದಿದ್ದಾರೆ. ಈ ಪಂದ್ಯದಲ್ಲಿ ಚಂದ್ರಪಾಲ್ ಟೀಂ ಬರೋಬ್ಬರಿ 192 ರನ್ ಗಳಿಂದ ಜಯ ಸಾಧಿಸಿದೆ.
2015 ರಲ್ಲಿ ವಿಂಡೀಸ್ ತಂಡ ಚಂದ್ರಪಾಲ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಚಂದ್ರಪಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇಂದಿಗೂ ತಮ್ಮ ಪ್ರದರ್ಶನ ಮುಂದುವರಿಸಿದ್ದಾರೆ.
ಚಂದ್ರಪಾಲ್ ಏಕದಿನ ಕ್ರಿಕೆಟ್ನಲ್ಲಿ 8778 ರನ್, ಟೆಸ್ಟ್ ಕ್ರಿಕೆಟ್ನಲ್ಲಿ 11867 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 30 ಶತಕ, ಏಕದಿನದಲ್ಲಿ 11 ಶತಕ ಸಿಡಿಸಿದ್ದಾರೆ.